ಕೋಲಾರದಲ್ಲಿಯೂ ಎಂಡೋಸಲ್ಫಾನ್ ಭೀತಿ ಇದೆ, ಆಂಧ್ರಕ್ಕೆ ಹೋಗಲು ತೀರ್ಮಾನ ಮಾಡಿದ್ದೇವೆ ಎಂದ ಜೆಡಿಎಸ್ ಶಾಸಕ!
► ರಾಜ್ಯಕ್ಕೆ ಧಕ್ಕೆಯಾಗುವ ರೀತಿಯ ಹೇಳಿಕೆ ಬೇಡ ಎಂದ ಕಾಂಗ್ರೆಸ್ ಸದಸ್ಯರು
ಬೆಂಗಳೂರು, ಜು.12: ಕೆ.ಸಿ.ವ್ಯಾಲಿ ಮೂಲಕ ಕೋಲಾರಕ್ಕೆ ನೀಡುತ್ತಿರುವ ನೀರನ್ನು ಮೂರನೆ ಹಂತದಲ್ಲಿ ಶುದ್ಧೀಕರಿಸದಿದ್ದರೆ ಮುಂದಿನ ದಿನಗಳಲ್ಲಿ ಕೋಲಾರದಲ್ಲಿಯೂ ಕರಾವಳಿ ಭಾಗದಲ್ಲಿ ಎಂಡೋಸಲ್ಫಾನ್ ಸಿಂಪಡೆಣೆಯಿಂದ ಆದಂತಹ ಅನಾಹುತದ ಪರಿಸ್ಥಿತಿ ಬರಬಹುದು ಎಂದು ಜೆಡಿಎಸ್ ಸದಸ್ಯ ಸಮೃದ್ಧಿ ಮಂಜುನಾಥ್ ಆತಂಕ ವ್ಯಕ್ತಪಡಿಸಿದರು.
ಬುಧವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್, ಬಿಜೆಪಿ ಸೇರಿದಂತೆ ಯಾರೆ ಬಂದರೂ ನಮ್ಮ ಜಿಲ್ಲೆಗೆ ಕುಡಿಯುವ ನೀರು ಕೊಡುವ ಪ್ರಯತ್ನ ಮಾಡುತ್ತಿಲ್ಲ. ಈ ಹಿಂದೆ ಸಿದ್ದರಾಮಯ್ಯ ಸರಕಾರದಲ್ಲಿ ಎತ್ತಿನಹೊಳೆ ಯೋಜನೆ ಜಾರಿಗೆ ಅಡಿಗಲ್ಲು ಹಾಕಲಾಗಿತ್ತು. ಆದರೆ, ನೀರು ಮಾತ್ರ ಬರಲಿಲ್ಲ ಎಂದರು.
ವೀರಪ್ಪ ಮೊಯ್ಲಿ ಹಾಗೂ ಕೆ.ಎಚ್.ಮುನಿಯಪ್ಪ ಎತ್ತಿನಹೊಳೆ ಯೋಜನೆ ಬಗ್ಗೆ ನಮ್ಮ ಜಿಲ್ಲೆಯವರಿಗೆ ಸುಳ್ಳು ಹೇಳಿಕೊಂಡೆ ಬಂದಿದ್ದಾರೆ. ನಾವು ಏನು ತಪ್ಪು ಮಾಡಿದ್ದೇವೆ. ನಮಗೆ ನಾಲೆ, ನದಿ, ಸಮುದ್ರ ಯಾವುದು ಇಲ್ಲ. ಕೊಳವೆ ಬಾವಿಯನ್ನೆ ನಂಬಿಕೊಂಡಿದ್ದೇವೆ ಎಂದು ಮಂಜುನಾಥ್ ಹೇಳಿದರು.
‘ಆಂಧ್ರಕ್ಕೆ ಹೋಗಲು ತೀರ್ಮಾನ’ ಕಾಂಗ್ರೆಸ್ ಸದಸ್ಯರಿಂದ ಆಕ್ರೋಶ: ನಾವು ಕರ್ನಾಟಕ ಬಿಟ್ಟು ಆಂಧ್ರಕ್ಕೆ ಬಿಟ್ಟು ಹೋಗಲು ತೀರ್ಮಾನ ಮಾಡಿದ್ದೇವೆ ಎಂದು ಮಂಜುನಾಥ್ ನೀಡಿದ ಹೇಳಿಕೆಯನ್ನು ಟೀಕಿಸಿದ ಕಾಂಗ್ರೆಸ್ ಸದಸ್ಯ ಪಿ.ಎಂ.ನರೇಂದ್ರ ಸ್ವಾಮಿ, ರಾಜ್ಯದ ವಿಧಾನಸಭೆಯಲ್ಲಿ ನಿಂತು ರಾಜ್ಯಕ್ಕೆ ಧಕ್ಕೆಯಾಗುವ ರೀತಿಯ ಹೇಳಿಕೆ ನೀಡಬೇಡಿ ಎಂದರು.
ಇದಕ್ಕೆ ದನಿಗೂಡಿಸಿದ ಸಚಿವ ಪ್ರಿಯಾಂಕ್ ಖರ್ಗೆ, ನಾವು ಜನ ಪ್ರತಿನಿಧಿಯಾಗಿ ಸದನದಲ್ಲಿ ಈ ರೀತಿ ಮಾತನಾಡಿದರೆ, ಜನರಿಗೆ ಏನು ಸಂದೇಶ ಹೋಗುತ್ತದೆ. ಹಲವಾರು ಕಷ್ಟಗಳು, ನೋವು ಇರಬಹುದು. ಆದರೆ, ರಾಜ್ಯ ಬಿಟ್ಟು ಹೋಗುತ್ತೇವೆ ಎಂದು ಹೇಳುವುದು ಸರಿಯಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಮಂಜುನಾಥ್, ಕೃಷ್ಣಾ ನದಿ ನೀರನ್ನು ಮಹಾರಾಷ್ಟ್ರದಿಂದ ಆಂಧ್ರಕ್ಕೆ ಕೊಡುವ ಪಾಲನ್ನು ಪಡೆದಿದ್ದಾರೆ. ಆದರೆ, ನಾವು ಯಾಕೆ ನಮ್ಮ ಪಾಲು ಪಡೆಯಲು ಸಾಧ್ಯವಾಗಿಲ್ಲ. ಕೆ.ಸಿ.ವ್ಯಾಲಿ ಯೋಜನೆ ಮೂಲಕ ನೀಡುತ್ತಿರುವ ನೀರನ್ನು ಮೂರನೆ ಹಂತದ ಶುದ್ಧೀಕರಣ ಮಾಡದಿದ್ದರೆ ನಾವು ವಿಷಯುಕ್ತ ನೀರು ಸೇವನೆ ಮಾಡಬೇಕಾಗುತ್ತದೆ ಎಂದರು.
ನಮ್ಮ ಭಾಗದಲ್ಲಿ ಬೆಳೆಯುವ ಮಾವು, ಟೊಮೊಟೊ, ರೇಶ್ಮೆ ಮತ್ತು ಹಾಲನ್ನು ರಫ್ತು ಮಾಡುತ್ತೇವೆ. ಬೆಲೆ ಕುಸಿತದಿಂದಾಗಿ ಮಾವು ಬೆಳೆಯನ್ನು ರಸ್ತೆಗೆ ಹಾಕುತ್ತಿದ್ದೇವೆ. ಮೊದಲ ಬಾರಿ ನಾನು ಸದನದಲ್ಲಿ ಮಾತನಾಡುತ್ತಿದ್ದೇನೆ. ತಪ್ಪು ಮಾತನಾಡಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಮಂಜುನಾಥ್ ಹೇಳಿದರು.