ಉದ್ದಿಮೆ, ಶಿಕ್ಷಣ ಸಂಸ್ಥೆಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಬಳಕೆ ಆಗಲೇಬೇಕು: ಸಚಿವ ಶಿವರಾಜ್ ತಂಗಡಗಿ
"ಅಂಗಡಿಗಳ ಮೇಲೆ ಕಲ್ಲೆಸೆತ ಸರಿಯಲ್ಲ"
ಸಚಿವ ಶಿವರಾಜ್ ತಂಗಡಗಿ
ಬೆಂಗಳೂರು, ಡಿ.27: ರಾಜ್ಯದ ನೆಲ, ಜಲ, ಭಾಷೆಯ ವಿಚಾರದಲ್ಲಿ ಯಾವುದೆ ರಾಜಿ ಇಲ್ಲ. ಎಲ್ಲ ವ್ಯಾಪಾರ ಉದ್ದಿಮೆ ಹಾಗೂ ಶಿಕ್ಷಣ ಸಂಸ್ಥೆಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಬಳಕೆ ಆಗಲೇಬೇಕು ಎಂಬುದರ ಬಗ್ಗೆ ಕಠಿಣ ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಬುಧವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ದಿಮೆ, ಶಿಕ್ಷಣ ಸಂಸ್ಥೆಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಪದಗಳೆ ಇರಬೇಕು. ಈ ಸಂಬಂಧ ಗೃಹ ಇಲಾಖೆ, ಶಿಕ್ಷಣ ಇಲಾಖೆಯೊಂದಿಗೆ ಕಾನೂನು ಜಾರಿಗೆ ತರಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಕನ್ನಡ ಸಮಗ್ರ ಭಾಷೆ ಅಭಿವೃದ್ಧಿ ವಿಧೇಯಕ ಮಸೂದೆ ವಿಧಾನಸಭೆ ಹಾಗೂ ವಿಧಾನಪರಿಷತ್ ನಲ್ಲಿ ಮಂಡನೆಯಾಗಿದೆ ಎಂದರು.
ಕೇವಲ ದಂಡ ವಿಧಿಸಿದರೆ ಪ್ರಯೋಜನವಿಲ್ಲ. ಶೇ.60ರಷ್ಟು ಕನ್ನಡ ಬಳಕೆ ಮಾಡದ ಉದ್ದಿಮೆಗಳ ಪರವಾನಗಿಯನ್ನು ರದ್ದು ಮಾಡುವಂತಹ ಕಠಿಣ ನಿಯಮ ಈ ಕಾನೂನಿನಲ್ಲಿ ಇರಲಿದ್ದು, ಶೀಘ್ರ ಕಾನೂನನ್ನು ಜಾರಿಗೆ ತರಲಾಗುವುದು ಎಂದು ಶಿವರಾಜ್ ತಂಗಡಗಿ ತಿಳಿಸಿದರು.
ಟಾಸ್ಕ್ ಫೋರ್ಸ್ ರಚನೆಗೆ ಚಿಂತನೆ: ಕನ್ನಡ ನಾಮಫಲಕಗಳ ಅಳವಡಿಕೆ ಸಂಬಂಧ ಟಾಸ್ಕ್ ಫೋರ್ಸ್ ನ್ನು ರಚಿಸುವ ಚಿಂತನೆ ಮಾಡಲಾಗಿದೆ. ಕೆಲವು ಶಿಕ್ಷಣ ಸಂಸ್ಥೆಗಳು ಉದ್ದೇಶ ಪೂರ್ವಕವಾಗಿ ನಾಮಫಲಕದಲ್ಲಿ ಕನ್ನಡ ಅಳವಡಿಕೆ ಮಾಡದಿರುವುದು ಗಮನಕ್ಕೆ ಬಂದಿದೆ. ನಾವು ಅನ್ಯಭಾಷಿಕ ವ್ಯಾಪಾರಿಗಳನ್ನು ಗೌರವಿಸುತ್ತೇವೆ. ಅವರು ಇಲ್ಲಿನ ಕಾನೂನನ್ನು ಗೌರವಿಸಬೇಕು. ಪ್ರತಿಯೊಂದು ಇಲಾಖೆಯಲ್ಲಿನ ಕಡತಗಳಲ್ಲಿ ಕಡ್ಡಾಯವಾಗಿ ಅಧಿಕಾರಿಗಳು ಕನ್ನಡವನ್ನೇ ಬಳಕೆ ಮಾಡಬೇಕು ಎಂದು ಅವರು ತಿಳಿಸಿದರು.
ಕಲ್ಲೆಸೆತ ಸರಿಯಲ್ಲ: ಕರ್ನಾಟಕ ರಕ್ಷಣಾ ವೇದಿಕೆಯು ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಇರಬೇಕು ಎಂಬ ಕೂಗಿಗೆ ನಮ್ಮ ಬೆಂಬಲ ಇದೆ. ಕನ್ನಡಪರ ಸಂಘಟನೆಗಳಷ್ಟೇ ಕಳಕಳಿ ಸರಕಾರಕ್ಕೂ ಇದೆ. ಇಲಾಖೆ ಕೂಡ ಕನ್ನಡ ಬಳಕೆ ಬಗ್ಗೆ ಶ್ರಮಿಸುತ್ತಿದೆ. ಪ್ರತಿಭಟನೆ ಯಾವುದೆ ಕಾರಣಕ್ಕೂ ತೀವ್ರ ಸ್ವರೂಪ ಪಡೆಯಬಾರದು. ಯಾವುದೆ ಅಂಗಡಿಗಳ ಮೇಲೆ ಕಲ್ಲು ಎಸೆಯುವಂತಹ ಘಟನೆ ಸರಿಯಲ್ಲ. ಪ್ರತಿಭಟನೆ ಶಾಂತಿಯುತವಾಗಿ ನಡೆಯಲಿ ಎಂದು ಶಿವರಾಜ್ ತಂಗಡಗಿ ಮನವಿ ಮಾಡಿದರು.
ಸಮಾವೇಶಗಳಿಗೆ ಅಪಾರ್ಥ ಬೇಡ: ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ವೀರಶೈವ-ಲಿಂಗಾಯತ ಸಮಾಜದ ಸಮಾವೇಶದಲ್ಲಿ ಕಾಂತರಾಜು ವರದಿ ತಿರಸ್ಕರಿಸುವ ಬಗ್ಗೆ ಕೈಗೊಂಡಿರುವ ನಿರ್ಣಯದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಸಮಾಜದ ಸಮಾವೇಶಗಳು ನಡೆದಾಗ ಆ ಸಮುದಾಯದ ಸಂಘಟನೆ ಮಾಡುವ ನಿಟ್ಟಿನಲ್ಲಿ ನಡೆದಿರುತ್ತವೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.
ಆ ಸಮಾಜದ ಸಂಘಟನೆಯಲ್ಲಿ ಇದೊಂದು ಬೇಡಿಕೆ. ಕಾಂತರಾಜು ವರದಿ ಜಾತಿಗೆ ಸೀಮಿತವಾದ ವರದಿ ಅಲ್ಲ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕತೆ ಬಗ್ಗೆ ತಿಳಿದುಕೊಳ್ಳುವ ವರದಿ. ವರದಿ ಸ್ವೀಕಾರ ಮಾಡದೆ ವರದಿ ತಿರಸ್ಕಾರ ಮಾಡಿ ಎಂದು ಹೇಳುವುದು ಸರಿಯಲ್ಲ ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ವರದಿ ಸ್ವೀಕಾರ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಈಗಾಗಲೇ ಹೇಳಿದ್ದಾರೆ. ನಾವು ಯಾವುದೋ ಖಾಸಗಿ ಏಜೆನ್ಸಿಯಿಂದ ಈ ವರದಿ ತಯಾರು ಮಾಡಿಸಿಲ್ಲ. ಸರಕಾರದ ಅಧಿಕಾರಿಗಳು ಹಾಗೂ ಶಿಕ್ಷಕರು ಪ್ರತಿಯೊಂದು ಮನೆಗೆ ಹೋಗಿ ಸಮೀಕ್ಷೆ ನಡೆಸಿದ್ದಾರೆ. ವರದಿ ಸ್ವೀಕಾರ ಮಾಡಬಾರದು ಎಂಬುದು ತಪ್ಪು. ವರದಿ ಸೋರಿಕೆ ಆಗಿದೆ ಎಂಬುದು ಸುಳ್ಳು ಎಂದು ಶಿವರಾಜ್ ತಂಗಡಗಿ ಹೇಳಿದರು.