ಕರಾವಳಿ ಅಭಿವೃದ್ಧಿ ಮಂಡಳಿ ಸ್ಥಾಪನೆ: ವಿಧೇಯಕ ಮಂಡನೆ
ಬೆಳಗಾವಿ: ಕರಾವಳಿ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ‘ಕರಾವಳಿ ಅಭಿವೃದ್ಧಿ ಮಂಡಳಿ’ಯನ್ನು ರಚಿಸುವುದು ಅವಶ್ಯಕವೆಂದು ಪರಿಗಣಿಸಿ ರಾಜ್ಯ ಸರಕಾರವು ಮಂಗಳವಾರ ವಿಧಾನಸಭೆಯಲ್ಲಿ ವಿಧೇಯಕ ಮಂಡನೆ ಮಾಡಿತು.
ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವ ಡಿ.ಸುಧಾಕರ್ ಬದಲು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ವಿಧೇಯಕ ಮಂಡನೆ ಮಾಡಿದರು. ಮಲೆನಾಡು ಪ್ರದೇಶದ ವ್ಯಾಖ್ಯಾನದೊಳಗಿನಿಂದ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಹೊರಗಿಡಲು ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಲಿ ಅಧಿನಿಯಮಕ್ಕೆ ತಿದ್ದುಪಡಿ ಮಾಡಲು ಈ ವಿಧೇಯಕ ಮಂಡನೆ ಮಾಡಲಾಗಿದೆ.
ಕರಾವಳಿ ಪ್ರದೇಶವನ್ನು ರಾಜ್ಯದ ಇತರ ಭಾಗಗಳ ಮಟ್ಟಕ್ಕೆ ತರುವುದಕ್ಕಾಗಿ ಅಭಿವೃದ್ಧಿ ಕಾರ್ಯದ ಹಂತವನ್ನು ತ್ವರಿತಗೊಳಿಸಲು ಕರಾವಳಿ ಪ್ರದೇಶ ಅಭಿವೃದ್ಧಿ ಮಂಡಲಿ ಸ್ಥಾಪನೆ, ಒಂದು ಅನುಷ್ಠಾನ ಸಮಿತಿ ರಚನೆ, ಕರಾವಳಿ ಪ್ರದೇಶದ ಅಭಿವೃದ್ಧಿಗಾಗಿ ಒಂದು ಯೋಜನೆಯನ್ನು ಸಿದ್ಧಪಡಿಸಲು, ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆ ಮಾಡಲು ಮತ್ತು ಆ ಪ್ರದೇಶದಲ್ಲಿನ ಅಭಿವೃದ್ಧಿ ಇಲಾಖೆಗಳು ಹಾಗೂ ಜಿಲ್ಲಾ ಪರಿಷತ್ತುಗಳ ಕಾರ್ಯ ನಿರ್ವಹಣೆಯನ್ನು ಸಮನ್ವಯಗೊಳಿಸಲು ಮಂಡಲಿಗೆ ಅಧಿಕಾರ ನೀಡಲು ಒಂದು ಸಮಗ್ರ ಶಾಸನವನ್ನು ಮಾಡಲು ಈ ವಿಧೇಯಕ ಮಂಡಿಸಲಾಗಿದೆ ಎಂದು ವಿವರಿಸಲಾಗಿದೆ.
ಗ್ರಂಥಾಲಯ ಪ್ರಾಧಿಕಾರಕ್ಕೆ ಸದಸ್ಯರ ನೇಮಕ: ಚುನಾವಣಾ ಪ್ರಸ್ತಾವ ಮಂಡನೆ
ರಾಜ್ಯ ಸಾರ್ವಜನಿಕ ಗ್ರಂಥಾಲಯಗಳ ಅಧಿನಿಯಮದ ಮೇರೆಗೆ ವರ್ಗಾಯಿಸಬಹುದಾದ ಒಂಟಿ ಮತದ ಮೂಲಕ ಪ್ರಾತಿನಿಧ್ಯದ ತತ್ವದ ಆಧಾರದ ಮೇಲೆ ವಿಧಾನಸಭೆಯು ರಾಜ್ಯ ಗ್ರಂಥಾಲಯ ಪ್ರಾಧಿಕಾರಕ್ಕೆ ನಾಲ್ಕು ಸದಸ್ಯರನ್ನು ಚುನಾಯಿಸಬೇಕೆಂಬ ಚುನಾವಣಾ ಪ್ರಸ್ತಾವವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮಂಗಳವಾರ ಸದನದಲ್ಲಿ ಮಂಡಿಸಿದರು.