ಬಳ್ಳಾರಿಯಲ್ಲಿ ʼಜೀನ್ಸ್ ಪಾರ್ಕ್ʼ ಸ್ಥಾಪನೆ, 154 ಎಕರೆ ಸ್ವಾಧೀನ : ಎಂ.ಬಿ.ಪಾಟೀಲ್
ಪ್ರಮುಖ ಜವಳಿ ಉದ್ಯಮಗಳ ಅಹ್ವಾನಕ್ಕೆ ಸಿದ್ಧತೆ
ಎಂ.ಬಿ.ಪಾಟೀಲ್
ಬೆಂಗಳೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಕೊಟ್ಟಿದ್ದ ಭರವಸೆಯಂತೆ ಬಳ್ಳಾರಿಗೆ ಹೊಂದಿಕೊಂಡಿರುವ ಸಂಜೀವರಾಯನ ಕೋಟೆಯಲ್ಲಿ ಕೆಐಎಡಿಬಿ ವತಿಯಿಂದ `ಜೀನ್ಸ್ ಪಾರ್ಕ್’ ಸ್ಥಾಪಿಸಲಾಗುವುದು. ಇದಕ್ಕಾಗಿ ಈಗಾಗಲೇ 154 ಎಕರೆ ಜಮೀನನ್ನು ಸ್ವಾಧೀನಪಡಿಸಲಾಗಿದ್ದು, ಇಲ್ಲಿ ಅಂತಾರಾಷ್ಟ್ರೀಯ ಮಟ್ಟದ ಜೀನ್ಸ್ ಉಡುಪು ತಯಾರಿಕೆಯ ಕಂಪನಿಗಳೂ ಇರುವಂತೆ ನೋಡಿಕೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಗುರುವಾರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ʼಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆ ಉಂಟಾದ ಮೇಲೆ ಅಲ್ಲಿನ ಜೀನ್ಸ್ ಉಡುಪು ತಯಾರಿಕೆ ಉದ್ಯಮ ನೆಲ ಕಚ್ಚಿದೆ. ಹೂಡಿಕೆದಾರರು ಮತ್ತು ರಫ್ತುದಾರರ ಗಮನ ಈಗ ಬಳ್ಳಾರಿಯಲ್ಲಿನ ಜೀನ್ಸ್ ತಯಾರಿಕೆ ಉದ್ಯಮದ ಮೇಲೆ ಹರಿದಿದೆ. ಇದನ್ನು ನಾವು ಸದಾವಕಾಶವಾಗಿ ಪರಿವರ್ತಿಸಿಕೊಂಡು, ಹೂಡಿಕೆಯನ್ನು ಆಕರ್ಷಿಸಲಿದ್ದೇವೆ’ ಎಂದಿದ್ದಾರೆ.
ಬಳ್ಳಾರಿಯಲ್ಲಿ 500ಕ್ಕಿಂತಲೂ ಹೆಚ್ಚು ಜೀನ್ಸ್ ಉಡುಪು ತಯಾರಿಕೆ ಘಟಕಗಳಿದ್ದು, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿವೆ. ಇದಕ್ಕೆ ವ್ಯವಸ್ಥಿತ ರೂಪ ಕೊಟ್ಟು, ಇದನ್ನು ರಫ್ತು ಕೇಂದ್ರಿತವಾಗಿಯೂ ಬೆಳೆಸಬೇಕು ಎನ್ನುವುದು ಕೈಗಾರಿಕಾ ಇಲಾಖೆಯ ಚಿಂತನೆಯಾಗಿದೆ. ಇದಕ್ಕಾಗಿ ಜವಳಿ ಇಲಾಖೆಯ ಸಹಾಯವನ್ನೂ ಪಡೆಯಲಾಗುವುದು. ಆ ಇಲಾಖೆಯಲ್ಲಿ ಜೀನ್ಸ್ ತಯಾರಿಕೆ ಘಟಕಗಳಿಗೆ ರಿಯಾಯಿತಿ ಕೊಡುವ ವ್ಯವಸ್ಥೆ ಇದ್ದರೆ ಅದನ್ನೂ ಕೊಡಿಸುವ ಕೆಲಸ ಮಾಡಲಾಗುವುದು. ಈ ಸಂಬಂಧ ಜವಳಿ ಸಚಿವರ ಜತೆಗೂ ಸಭೆ ನಡೆಸಲಾಗುವುದು ಎಂದು ಅವರು ವಿವರಿಸಿದ್ದಾರೆ.
ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಬಳ್ಳಾರಿಯ ಜೀನ್ಸ್ ತಯಾರಿಕೆ ಘಟಕಗಳ ಉದ್ಯೋಗಿಗಳು ಮತ್ತು ಮಾಲೀಕರ ಜತೆ ಮಾತುಕತೆ ನಡೆಸಿದ್ದರು. ಆಗ ಅವರು, ಜೀನ್ಸ್ ಪಾರ್ಕ್ ಸ್ಥಾಪಿಸುವ ಭರವಸೆ ನೀಡಿದ್ದರು. ಇದಾದ ಮೇಲೆ, 2023ರ ಆಗಸ್ಟ್ 1ರಂದು ನಮ್ಮ ಇಲಾಖೆಗೆ ಪತ್ರ ಬರೆದು, ಈ ಬಗ್ಗೆ ಗಮನ ಸೆಳೆದಿದ್ದರು. ಈ ಯೋಜನೆಯ ಅನುಷ್ಠಾನಕ್ಕೆ ಈಗ ಕಾಲ ಪ್ರಶಸ್ತವಾಗಿದ್ದು, ಅಂತಾರಾಷ್ಟ್ರೀಯ ಪರಿಸ್ಥಿತಿ ಅನುಕೂಲಕರವಾಗಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಕಳೆದ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್ನಲ್ಲೂ ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪಿಸುವ ಘೋಷಣೆ ಮಾಡಿದ್ದಾರೆ. ಈಗ ಅಸಂಘಟಿತವಾಗಿರುವ ಜೀನ್ಸ್ ಉದ್ಯಮಕ್ಕೆ ಸಂಘಟಿತ ರೂಪ ಕೊಟ್ಟು, ಇದನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಏರಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಬಳ್ಳಾರಿ ಜೀನ್ಸ್ ಪಾರ್ಕ್ ನಿಂದ ಪ್ರಾದೇಶಿಕ ಆರ್ಥಿಕತೆಗೆ ಚೈತನ್ಯ ಬರಲಿದೆ. ಜತೆಗೆ ನಾವೀನ್ಯತೆ ಮತ್ತು ಉಡುಪು ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆಗಳಿಗೆ ಆದ್ಯತೆ ಸಿಗಲಿದೆ ಎಂದು ಪಾಟೀಲ್ ಭರವಸೆ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ ಸುತ್ತಮುತ್ತ ಈಗಾಗಲೇ ಸಕ್ರಿಯವಾಗಿರುವ ಜೀನ್ಸ್ ಉಡುಪು ತಯಾರಿಕೆ ಘಟಕಗಳಿಗೂ ಹೆಚ್ಚಿನ ನೆರವು ನೀಡಲಾಗುವುದು. ಜೀನ್ಸ್ ಉಡುಪುಗಳು ಯುವಜನಾಂಗಕ್ಕೆ ಅಚ್ಚುಮೆಚ್ಚಿನದ್ದಾಗಿವೆ. ಇಲ್ಲಿರುವ ಮಾರುಕಟ್ಟೆಯನ್ನು ನಾವು ಗುರಿಯಾಗಿಟ್ಟುಕೊಂಡು, ದಾಪುಗಾಲಿಡಲಿದ್ದೇವೆ. ರಾಜ್ಯದ ಉದ್ಯಮಸ್ನೇಹಿ ಕೈಗಾರಿಕಾ ನೀತಿಯು ಇದಕ್ಕೆ ಮತ್ತಷ್ಟು ಇಂಬು ಕೊಡಲಿದೆ ಎಂದು ಸಚಿವರು ಹೇಳಿದ್ದಾರೆ.