ಎತ್ತಿನಹೊಳೆ ಯೋಜನೆ ಪ್ರಗತಿ ಸಮಾಧಾನ ತಂದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್
ಸಕಲೇಶಪುರ, ಆ.22: ಎತ್ತಿನಹೊಳೆ ಯೋಜನೆ ಪ್ರಗತಿ ಸಮಾಧಾನ ತಂದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದ ಎತ್ತಿನಹೊಳೆ ಯೋಜನೆ ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಯೋಜನೆಯ ಪ್ರಗತಿ ಪರಿಶೀಲಿಸಿದ ಬಳಿಕ ಸಭ್ಯೆೌ ಮಾತನಾಡಿದ ಅವರು, ನಾನು ಸಕಲೇಶಪುರಕ್ಕೆ 2ನೇ ಬಾರಿ ಬಂದಿದ್ದು, ಎತ್ತಿನಹೊಳೆ ಯೋಜನೆಗೆ 24 ಸಾವಿರ ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ 14 ಸಾವಿರ ಕೋಟಿ ರೂ.ಗಳನ್ನು ಉಪಯೋಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಎತ್ತಿನಹೊಳೆ ಯೋಜನೆಯ ಉದ್ದೇಶವೇನೆಂದರೆ ಪಶ್ಚಿಮ ಘಟ್ಟದ ನೀರನ್ನು ಕೋಲಾರದವರೆಗೆ ತೆಗೆದುಕೊಂಡು ಹೋಗುವುದು. ಆದರೆ ಈ ಯೋಜನೆಯಡಿ ಅನೇಕ ಸಮಸ್ಯೆಗಳಿದ್ದು, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಇಂಧನ ಇಲಾಖೆಗಳು, ಗುತ್ತಿಗೆದಾರರಿಗೆ ಸರಿಯಾದ ಕ್ರಮದಲ್ಲಿ ಕೆಲಸ ನಿರ್ವಹಣೆ ಮಾಡಲು ತೊಂದರೆಯಾಗುತ್ತಿದೆ. ಈ ಯೋಜನೆಗೆ ಕೆಲವರು ಜಾಗ ಬಿಟ್ಟುಕೊಡದೆ ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಕೆಲವೊಂದು ಭಾಗದಲ್ಲಿ ಜಾಗದ ಕೊರತೆ ಉಂಟಾಗಿದ್ದು ಅದರ ಸಂಪೂರ್ಣ ಜವಾಬ್ದಾರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಹಿಸಿಕೊಂಡು ಸಹಕಾರ ನೀಡಬೇಕು. ಜೊತೆಗೆ ಜಿಲ್ಲಾಧಿಕಾರಿಯವರು ಯೋಜನೆಯನ್ನು ಶೀಘ್ರವೇ ಪೂರ್ಣಗೊಳಿಸಲು ಕ್ರಮವಹಿಸುವಂತೆ ಸೂಚಿಸಿದರು.
ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗಳನ್ನು 5 ಪ್ಯಾಕೇಜುಗಳಾಗಿ ನೀಡುವ ಮೂಲಕ ಸಂಬಂಧಿಸಿದ ವಿದ್ಯುತ್ ಕಾಮಗಾರಿಯನ್ನು 2 ಪ್ಯಾಕೆಜ್ ರೀತಿಯ ಆಧಾರದ ಮೇಲೆ ಗುತ್ತಿಗೆ ವಹಿಸಲಾಗಿದೆ. ಒಟ್ಟು 8 ವಿದ್ಯುತ್ ಹಬ್ ಸ್ಟೇಷನ್‌ಗಳಿದ್ದು ಇದರಲ್ಲಿ 7 ಹಬ್‌ಗಳು ಪೂರ್ಣಗೊಂಡಿದೆ. ಉಳಿದಿರುವ ಒಂದು ಹಬ್‌ಅನ್ನು ಆರಂಭಿಸಲು ಸೂಚನೆ ನೀಡಲಾಗಿದೆ. ಇನ್ನೂ 3 ದಿನಗಳಲ್ಲಿ ಮೊದಲ ಹಂತದ ನೀರನ್ನು ಪಂಪ್ ಔಟ್ ಮಾಡಲಾಗುವುದು ಎಂದ ಅವರು, ಇದಕ್ಕೆ ಸಂಭಂಧಿಸಿದ ಎಲ್ಲ ಅಧಿಕಾರಿಗಳಿಗೆ 100 ದಿನದ ಸಮಯವನ್ನು ನಿಗದಿ ಮಾಡಲಾಗಿದೆ ನಿಗದಿ ಮಾಡಿರುವ ಸಮಯದ ವೇಳೆಗೆ ಯೋಜನೆಯ ಸಂಪೂರ್ಣ ನೀರನ್ನು ಹೊರಗೆ ಹರಿಸಲಾಗುವುದು. ಯೋಜನೆಯ ಪ್ರಗತಿ ಪ್ರಕಾರ ಮೊದಲ ಹಂತದ ನೀರನ್ನು 12 ಕಿ.ಮಿ.ವರೆಗೆ ಹರಿಯುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು..
ಸಭೆಯಲ್ಲಿ ಸಂಸದರಾದ ಪ್ರಜ್ವಲ್ ರೇವಣ್ಣ, ಡಿ.ಕೆ.ಸುರೇಶ್, ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಸಿಮೆಂಟ್ ಮಂಜು, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಸಿಇಒ ಪೂರ್ಣಿಮಾ, ಎಎಸ್ಪಿಮಿಥುನ, ಉಪವಿಭಾಗಾಧಿಕಾರಿ ಶೃತಿ, ತಹಶೀಲ್ದಾರ್ ಮೇಘನಾ, ಎತ್ತಿನಹೊಳೆ ಯೋಜನೆಯ ಅಧಿಕಾರಿಗಳು, ಗುತ್ತಿಗೆದಾರರು, ತಾಲೂಕು ಆಡಳಿತದ ಅಧಿಕಾರಿಗಳು, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.
ಎತ್ತಿನಹೊಳೆ ಯೋಜನೆಗೆ ವಿದ್ಯುತ್ ಶಕ್ತಿ ಪೂರೈಸುವ ಎಲ್ಲ ಸಬ್‌ಸ್ಟೇಷನ್‌ಗಳು ಪೂರ್ಣ ಗೊಂಡಿದೆ. ಆದರೆ ಟ್ರಾನ್ಸ್‌ಮಿಷನ್ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣ ಹಂತದಲ್ಲಿದೆ. ಯೋಜನೆಗಾಗಿ ಒಟ್ಟಾರೆ 9,023 ಎಕರೆ 26 ಗುಂಟೆ ಜಮೀನಿನ ಅವಶ್ಯಕತೆ ಇದೆ. ಆದರೆ 5,454 ಎಕರೆ 15 ಗುಂಟೆ ಭೂ ಸ್ವಾಧೀನವಾಗಿದ್ದು, ಇನ್ನೂ ಭೂ ಸ್ವಾಧೀನದ ಪ್ರಕ್ರಿಯೆ ಪ್ರಗತಿಯಲ್ಲಿದೆ. ಭೂ ಸ್ವಾಧೀನಕ್ಕಾಗಿ ಒಟ್ಟಾರೆ 1,212 ಕೋಟಿ ರೂ. ವೆಚ್ಚ ಮಾಡಲಾಗಿದೆ.
-ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ