ವಿರೋಧ ಪಕ್ಷವಾಗಿಯೂ ಬಿಜೆಪಿ ಅಸಮರ್ಥ: ಕಾಂಗ್ರೆಸ್ ಲೇವಡಿ
ಬೆಂಗಳೂರು: ‘ಅಧಿಕಾರದಲ್ಲಿದ್ದಾಗ ಉತ್ತಮ ಆಡಳಿತ ಪಕ್ಷವಾಗಿರಲಿಲ್ಲ, ಜನ ತಿರಸ್ಕರಿಸಿದಾಗ ಉತ್ತಮ ವಿರೋಧ ಪಕ್ಷವಾಗಿಲ್ಲ. ವಿರೋಧ ಪಕ್ಷವಾಗಿಯೂ ಬಿಜೆಪಿ ಅಸಮರ್ಥವಾಗಿದೆ ಎಂಬುದನ್ನು ಸ್ವತಃ ಬಿಜೆಪಿ ಶಾಸಕರೇ ಒಪ್ಪಿಕೊಂಡಿದ್ದಾರೆ’ ಕಾಂಗ್ರೆಸ್ ಲೇವಡಿ ಮಾಡಿದೆ.
ಬುಧವಾರ ʼಎಕ್ಸ್ʼ ನಲ್ಲಿ ಸರಣಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ‘ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯ ಅಸ್ತಿತ್ವ ಮುಗಿದ ಅದ್ಯಾಯ, ಫೇಕ್ ನ್ಯೂಸ್ ಹಬ್ಬಿಸುವುದನ್ನೇ ವಿರೋಧ ಪಕ್ಷದ ಕೆಲಸ ಎಂದು ನಂಬಿಕೊಂಡಿರುವ ಬಿಜೆಪಿ ಪಕ್ಷವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆ’ ಎಂದು ವಾಗ್ದಾಳಿ ನಡೆಸಿದೆ.
‘ಕರ್ಮ ರಿಟನ್ರ್ಸ್ ಎಂದರೆ ಇದೇ ಅಲ್ಲವೇ ಬಿಜೆಪಿ?, ಅಧಿಕಾರವಿದ್ದಾಗ ದಲಿತ ವಿರೋಧಿಯಾಗಿ ನಡೆದುಕೊಂಡು ಈಗ ರಾಜಕೀಯ ಕಾರಣಕ್ಕೆ ಮೊಸಳೆ ಕಣ್ಣೀರು ಸುರಿಸಲು ಹೋದರೆ ಜನ ಕೇಳುವರೇ?, ಬಿಜೆಪಿಗರು ಹೋದಹೋದಲ್ಲಿ ಜನತೆ ತಪರಾಕಿ ಕೊಡುತ್ತಿದ್ದಾರೆ, ಆ ಮಟ್ಟಿಗೆ ಜನವಿರೋಧಿಯಾಗಿ ನಡೆದುಕೊಂಡಿತ್ತು ಬಿಜೆಪಿ. ಪ್ರಶ್ನೆ ಮಾಡಿದವರ ವಿರುದ್ಧ ದೂರು ನೀಡುವುದು ಯಾವ ಸೀಮೆಯ ದಲಿತಪರ ಕಾಳಜಿ’ ಎಂದು ಕಾಂಗ್ರೆಸ್ ಟೀಕಿಸಿದೆ.
‘ರಾಮಮಂದಿರ ಉದ್ಘಾಟನೆಗೆ ಬರಬೇಡಿ’ ಎಂದು ಅಡ್ವಾಣಿ ಹಾಗೂ ಜೋಶಿಯವರಿಗೆ ಮನವಿ ಮಾಡಿದ್ದೋ ಬೆದರಿಕೆ ಹಾಕಿದ್ದೋ?. ಇದು ನಿಜಕ್ಕೂ ರಾಮಮಂದಿರ ಟ್ರಸ್ಟ್ ನ ಅದೇಶವೇ ಅಥವಾ ಮೋದಿಯವರ ಆದೇಶವೇ?. ಬಿಜೆಪಿ ಹಾಗೂ ಸಂಘ ಪರಿವಾರ ಎಲ್ಲರನ್ನೂ ಬಳಸಿ ಬಿಸಾಡುತ್ತವೆ, ಮುಂದೆ ಮೋದಿಯವರಿಗೂ ಇದೇ ಸ್ಥಿತಿ ಬರುವುದು ನಿಶ್ಚಿತ’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.