ರಾಜ್ಯದಲ್ಲಿ ಸರಕಾರಿ ಅಧಿಕಾರಿಗಳಿಗೂ ರಕ್ಷಣೆ ಇಲ್ಲ: ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ
ಪ್ರತಿಮಾ - ಕೊಲೆಗೀಡಾದ ಅಧಿಕಾರಿ
ಬೆಂಗಳೂರು, ನ. 5: ‘ರಾಜ್ಯದ ಕಾಂಗ್ರೆಸ್ ಸರಕಾರದ ಅರಾಜಕತೆಯ ಆಡಳಿತದಲ್ಲಿ ಸರಕಾರಿ ಅಧಿಕಾರಿಗಳಿಗೂ ರಕ್ಷಣೆ ಇಲ್ಲ’ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕಿ ಪ್ರತಿಮಾ ಅವರನ್ನು ಮನೆಗೆ ನುಗ್ಗಿ ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಡಾ.ಜಿ.ಪರಮೇಶ್ವರ್ ಅವರೇ, ನೀವು ಈ ರಾಜ್ಯದ ಗೃಹ ಸಚಿವರು ಎಂಬುದನ್ನು ನಾವು ನೆನಪಿಸಬೇಕೆ?’ ಎಂದು ಪ್ರಶ್ನಿಸಿದೆ.
‘ರಾಜ್ಯದ ಅಭಿವೃದ್ಧಿಯನ್ನು ರಿವರ್ಸ್ಗೇರ್ ನಲ್ಲಿರಿಸಿರುವ ಕಾಂಗ್ರೆಸ್ ಸರಕಾರದ ಅಸಲಿ ಕರ್ನಾಟಕ ಮಾಡೆಲ್ ಇದು. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಆರಂಭವಾಗಿದ್ದ ಬಹುತೇಕ ಕಾಮಗಾರಿಗಳಿಗೆ ಅನುದಾನ ನೀಡದೆ, ಅರ್ಧದಲ್ಲಿ ನಿಲ್ಲಿಸಿದ್ದೇ ಸಿಎಂ ಸಿದ್ದರಾಮಯ್ಯ ಅವರ ಸರಕಾರದ 5 ತಿಂಗಳ ಸಾಧನೆ. ಅಧರ್ಂಬರ್ಧವಾಗಿರುವ ಕಾಮಗಾರಿಗಳು ಮುಂದಿನ ನಾಲ್ಕುವರೆ ವರ್ಷಗಳಲ್ಲಿ ಮುಗಿದರೆ, ಅದೇ ಕರ್ನಾಟಕ ಜನರ ಪುಣ್ಯ’ ಎಂದು ಬಿಜೆಪಿ ಲೇವಡಿ ಮಾಡಿದೆ.
‘ಬೆಂಗಳೂರಿನ ಬ್ರ್ಯಾಂಡ್ ಹೆಸರಿಗೆ ಧಕ್ಕೆ ತಂದಿದ್ದ ವರ್ತೂರು ಹಾಗೂ ಬೆಳ್ಳಂದೂರು ಕೆರೆಗಳ ಪುನಶ್ಚೇತನ ಕಾಮಗಾರಿಯನ್ನು ಕಾಂಗ್ರೆಸ್ ಸರಕಾರ ಸ್ಥಗಿತಗೊಳಿಸಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ಬ್ರ್ಯಾಂಡ್ ಬೆಂಗಳೂರಿನ ಹೆಸರಿನಲ್ಲಿ ಪಿಕ್ನಿಕ್ ಮಾಡುವ ನಿಮಗೆ, ಈ ಸಂಗತಿ ತಿಳಿದಿಲ್ಲವೇ ಅಥವಾ ಜಾಣಕುರುಡೇ?’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.