ಪ್ರತಾಪ್ ಸಿಂಹ ಜಾಗದಲ್ಲಿ ನಾನಿದ್ದರೂ ಸಂಸತ್ ನೋಡಲು ಪಾಸ್ ನೀಡುತ್ತಿದ್ದೆ: ಸಿ.ಟಿ. ರವಿ
"ಘಟನೆಯ ಹಿಂದೆ ಕಾಂಗ್ರೆಸ್ನ ಟೂಲ್ಕಿಟ್ ರಾಜಕೀಯ ಇರುವ ಅನುಮಾನವಿದೆ"
ಸಿ.ಟಿ.ರವಿ (PTI)
ಚಿಕ್ಕಮಗಳೂರು: ಸಂಸತ್ ನೋಡುತ್ತೇವೆ ಪಾಸ್ ಕೊಡಿ ಅಂದರೇ ಸಂಸದರಾದವರು ಕೊಡುತ್ತಾರೆ, ಪ್ರತಾಪ್ ಸಿಂಹ ಜಾಗದಲ್ಲಿ ನಾನಿದ್ದರೂ ಪಾಸ್ ಕೊಡುತ್ತಿದ್ದೆ, ಶಿಫಾರಸು ಮಾಡುವಾಗ ಒಳ್ಳೆಯವನೋ, ಕೆಟ್ಟವನೋ ಅಂತ ಗುರುತಿಸೋ ಐ ಸ್ಕ್ಯಾನರ್ ಯಾರ ಬಳಿಯೂ ಇರಲ್ಲ. ಘೋಷಿತ ಅಪರಾಧಿಗೆ ಶಿಫಾರಸು ಮಾಡಿದರೆ ಅದು ಅಪರಾಧವಾಗುತ್ತದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಊರಿನವರು ಪಾರ್ಲಿಮೆಂಟ್ ನೋಡಬೇಕು, ವಿಧಾನಸಭೆ ನೋಡಬೇಕು ಎಂದು ಮನವಿ ಮಾಡಿದರೆ, ನಾನು, ನೀವು, ಸಿದ್ದರಾಮಯ್ಯನವರೂ ಪಾಸ್ ಕೊಡಿಸುತ್ತಾರೆ. ಪಾಸ್ ಪಡೆದವನು ಒಳ್ಳೆಯವನೋ, ಕೆಟ್ಟವನೋ ಎಂದು ಯಾರಿಗೂ ಮುಂಚಿತವಾಗಿ ತಿಳಿದಿರುವುದಿಲ್ಲ, ಆದರೆ, ಸಂಸತ್ ಭವನದ ಒಳಗೆ ನುಗ್ಗಿದ ಘಟನೆಯಲ್ಲಿ ಭದ್ರತಾ ಲೋಪವಾಗಿರುವುದು ನಿಜ. ಅದನ್ನು ನಾನು ಸಮರ್ಥಿಸುವುದಿಲ್ಲ" ಎಂದರು.
ಘಟನೆ ಸಂಬಂಧ ಕಾಂಗ್ರೆಸ್ ಸಕ್ರಿಯವಾಗಿರುವುದನ್ನು ನೋಡಿದರೆ ಈ ಘಟನೆಯಲ್ಲಿ ಟೂಲ್ಕಿಟ್ ರಾಜಕೀಯದ ಅನುಮಾನ ವ್ಯಕ್ತವಾಗುತ್ತಿದೆ. ಈ ಘಟನೆಯಿಂದ ಕಾಂಗ್ರೆಸ್ ಸಂಸದನ ಮನೆಯಲ್ಲಿನ ನೋಟಿನ ಘಟನೆ ಮರೆತು ಹೋಗಿದೆ. ಇದರ ಬಗ್ಗೆ ಒಂದೇ ಒಂದು ಶಬ್ದವನ್ನೂ ರಾಹುಲ್ ಗಾಂಧಿ ಮಾತನಾಡಿಲ್ಲ. ಈ ಕಾರಣದಿಂದಲೇ ಐಟಿ, ಈಡಿ, ಸಿಬಿಐ ದಾಳಿ ಅಂದರೇ ಕಾಂಗ್ರೆಸ್ ಭಯ ಪಡುತ್ತದೆ ಎಂದ ಅವರು, ಧೀರಜ್ ಸಾಹು ಅಂತವರು ನೂರಾರು ಜನ ಕಾಂಗ್ರೆಸ್ಸಿಗರ ಬಳಿ ಇದ್ದಾರೆ. ಇದೆಲ್ಲ ಲೋಕಸಭೆ ಚುನಾವಣೆಗೆ ಸಂಗ್ರಹಿಸಿಟ್ಟಿರುವ ಹಣ. ಮೋದಿ ಪ್ರಧಾನಿ ಆಗುವುದನ್ನು ತಪ್ಪಿಸಬೇಕು ಎಂದು ಷಡ್ಯಂತ್ರವನ್ನು ಕಾಂಗ್ರೆಸ್ ನಡೆಸುತ್ತಿದೆ ಎಂದರು.
ಅಪಪ್ರಚಾರ, ಕಳ್ಳಹಣದ ಜೊತೆ ವಿದೇಶಿ ಶಕ್ತಿಗಳು ಈ ಘಟನೆಯಲ್ಲಿ ಶಾಮೀಲಾಗಿರುವ ಸಂಶಯ ಇದೆ. ಇದರ ಹಿಂದಿನ ಶಕ್ತಿ ಯಾರು, ಯಾರಿಗೆ ಯಾರ ಜೊತೆ ಸಂಬಂಧವಿದೆ ಎಂಬುದು ತನಿಖೆಯಾಗಬೇಕು ಎಂದು ಆಗ್ರಹಿಸಿದರು.