ಪ್ರಜ್ವಲ್ ರೇವಣ್ಣ ಗೆದ್ದರೂ ಅಮಾನತು ಆದೇಶ ವಾಪಸ್ಸು ಬೇಡ : ಆರ್.ಅಶೋಕ್
ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿಜೇತರಾದರೂ ಅವರನ್ನು ಜೆಡಿಎಸ್‍ನಿಂದ ಕೆಲಕಾಲ ಅಮಾನತು ಮಾಡಿರುವ ನಿರ್ಧಾರವನ್ನು ಹಿಂತೆಗೆದುಕೊಳ್ಳದಂತೆ ಪಕ್ಷದ ನಾಯಕರಿಗೆ ನಾವೇ ಮನವಿ ಸಲ್ಲಿಸುತ್ತೇವೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ರವಿವಾರ ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಜೆಡಿಎಸ್ ಕೂಡ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಅವರನ್ನು ಪಕ್ಷದಿಂದ ಅಮಾನತುಪಡಿಸಲಾಗಿದೆ. ಮುಂದೆ ಅವರು ವಿಜೇತರಾದರೂ ಅಮಾನತು ಆದೇಶವನ್ನು ಹಿಂಪಡೆಯದಂತೆ ಮನವಿ ಮಾಡುತ್ತೇವೆ ಎಂದರು.
ಅಲ್ಲದೆ, ತನಿಖೆ ಮುಗಿದು ನ್ಯಾಯಾಲಯದ ತೀರ್ಪು ಬರುವರೆಗೂ ಅಮಾನತು ಪ್ರಕರಣನ್ನು ವಾಪಸ್ ಪಡೆಯಬಾರದು. ಈ ನಿಲುವಿನಿಂದ ಕುಮಾರಸ್ವಾಮಿ ಹಿಂದೆ ಸರಿಯಬಾರದೆಂದು ಎಂದ ಅವರು, ಈ ಪ್ರಕರಣದಿಂದ ಫಲಿತಾಂಶದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ. ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸಿಗರು ಲಾಭ ಮಾಡಿಕೊಳ್ಳಲು ಹೊರಟಿದ್ದರು. ಮತದಾರರಿಗೆ ಇವರ ನಿಜವಾದ ಬಂಡವಾಳ ಗೊತ್ತಾಗಿದೆ ಎಂದು ಟೀಕಿಸಿದರು.
ಬರಗಾಲದ ಪರಿಹಾರದ ವಿಚಾರದಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರ ಇನ್ನೂ ಕುಂಭಕರ್ಣ ನಿದ್ರೆಯಲ್ಲಿದೆ. ಹಣ ಬಂದು ಕ್ಷಣದಲ್ಲಿ ರೈತರಿಗೆ ನೀಡುವುದಾಗಿ ಹೇಳಿದ್ದರು. ಕ್ಷಣಗಳು ಹೋಗಿ ಗಂಟೆಗಳಾಗಿ, ಈಗ ದಿನಗಳೇ ಕಳೆದಿವೆ. ರೈತರು ಈ ಬಿಸಿಲಿನ ಬೇಗೆಯಿಂದ ಹಾಹಾಕಾರ ಪಡುತ್ತಿದ್ದಾರೆ. ರಾಜ್ಯ ಸರಕಾರವು ಬೇರೆ ರಾಜಕಾರಣ ಮಾಡುತ್ತಿದೆ. ರೈತರ ಕಷ್ಟಕ್ಕೆ ಸ್ಪಂದಿಸದ ಕಟುಕ- ಕರುಣೆ ಇಲ್ಲದ ರಾಜ್ಯ ಸರಕಾರ ಇದು ಎಂದು ಆರೋಪಿಸಿದರು.
ಮೇವು ಇಲ್ಲದೆ ದನಕರುಗಳನ್ನು ಕಟುಕರಿಗೆ ಮಾರಾಟ ಮಾಡುವ ಸ್ಥಿತಿಗೆ ರೈತರು ಬರುತ್ತಿರುವುದು ಬೇಸರದ ಸಂಗತಿ. ಈ ಸರಕಾರ ಒಂದು ರೀತಿಯಲ್ಲಿ ಬೂಟಾಟಿಕೆ ಮಾಡುತ್ತಿದೆ. ಜಾಹೀರಾತುಗಳನ್ನು ಕೊಡುತ್ತಿದೆ. ಆದರೆ, ರೈತರ ಸಂಕಷ್ಟಕ್ಕೆ ಸ್ಪಂದಿಸುವ ಗಂಭೀರತೆ ಎಲ್ಲೂ ಕಾಣಿಸುತ್ತಿಲ್ಲ ಎಂದು ಅವರು ಟೀಕಿಸಿದರು.