ಸ್ವಾಮೀಜಿ ಸಿಕ್ಕಿಹಾಕಿಕೊಳ್ಳಲಿ, ದೊಡ್ಡ ದೊಡ್ಡವರ ಹೆಸರು ಹೊರಗೆ ಬರುತ್ತೆ: ಆರೋಪಿ ಚೈತ್ರಾ ಕುಂದಾಪುರ
ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂ. ವಂಚನೆ ಪ್ರಕರಣ
ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರಿನ ಉದ್ಯಮಿ, ಬಿಜೆಪಿ ಮುಖಂಡರೊಬ್ಬರಿಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ವಂಚಿಸಿರುವ ಆರೋಪದಡಿ ಬಂಧನಕ್ಕೊಳಗಾಗಿರುವ ಪ್ರಮುಖ ಆರೋಪಿ ಪ್ರಚೋದನಾಕಾರಿ ಭಾಷಣಗಾರ್ತಿ ಚೈತ್ರಾ ಕುಂದಾಪುರ ಸೇರಿ 6 ಮಂದಿ ಆರೋಪಿಗಳನ್ನು ಸಿಸಿಬಿ ವಶಕ್ಕೆ ಒಪ್ಪಿಸಲಾಗಿದೆ.
ಈ ನಡುವೆ ಮಹಿಳಾ ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಕರೆತರುವ ವೇಳೆ ಚೈತ್ರಾ ಕುಂದಾಪುರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ,ʼʼ ಸ್ವಾಮೀಜಿ ಬಂಧನವಾಗಲಿ, ಸತ್ಯ ಹೊರ ಬರುತ್ತೆ, ಆಗ ದೊಡ್ಡ ದೊಡ್ಡವರ ಹೆಸರು ಕೂಡ ಬಹಿರಂಗವಾಗುತ್ತದೆʼʼ ಎಂಬ ಅಂಶವನ್ನು ಬಿಚ್ಚಿಟ್ಟಿದ್ದಾಳೆ.
ಬಳ್ಳಾರಿ ಜಿಲ್ಲೆಯ ಹಡಗಲಿಯ ಹಾಲಶ್ರೀ ಸ್ವಾಮೀಜಿಗೆ ಪ್ರಧಾನಿ ಕಚೇರಿಯ ಸಂಪರ್ಕವಿದೆ ಎಂದು ಗೋವಿಂದ ಬಾಬು ಪೂಜಾರಿ ಅವರಿಂದ ಒಂದೂವರೆ ಕೋಟಿ ಹಣ ಹಾಕಿಸಲಾಗಿದೆ. ಗೋವಿಂದ ಪೂಜಾರಿ ಜೊತೆಯಲ್ಲಿ ಚೈತ್ರಾ ಸಹ ಹಡಗಲಿಗೆ ತೆರಳಿ ಸ್ವಾಮೀಜಿಯನ್ನು ಭೇಟಿಯಾಗಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಿನ್ನೆ ಬಂಧನಕ್ಕೊಳಗಾದ ಆರೋಪಿಯನ್ನು ರಾತ್ರಿ ಬೆಂಗಳೂರಿನ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು. ಸದ್ಯ 10 ದಿನಗಳ ಕಾಲ ಕಸ್ಟಡಿಗೆ ಪಡೆದಿರುವ ಸಿಸಿಬಿ ಪೊಲೀಸರು, ಸಿಸಿಬಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಲಿದ್ದಾರೆ.