ಸಂವಿಧಾನದ ಉಳಿವಿಗೆ ಜಾಗೃತಿ ಮೂಡಿಸಿ ಎಲ್ಲರನ್ನು ಸಜ್ಜುಗೊಳಿಸಬೇಕಿದೆ: ನ್ಯಾ. ನಾಗಮೋಹನದಾಸ್
ಹರಿಹರದಲ್ಲಿ ಕದಸಂಸ ರಾಜ್ಯ ಮಟ್ಟದ ಅಧ್ಯಯನ ಶಿಬಿರ
ಹರಿಹರ: ಸಂವಿಧಾನವನ್ನು ಅಪ್ರಸ್ತುತಗೊಳಿಸುವ ಹುನ್ನಾರ ನಡೆಯುತ್ತಿದ್ದು ಸಂವಿಧಾನದ ಉಳಿವಿಗೆ ಜಾಗೃತಿ ಮೂಡಿಸಿ ಎಲ್ಲರನ್ನು ಸಜ್ಜುಗೊಳಿಸಬೇಕಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಹೇಳಿದರು.
ಹೊರವಲಯದ ಮೈತ್ರಿ ವನದ ಪ್ರೊ.ಬಿ.ಕೃಷ್ಣಪ್ಪ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಮಿತಿಯಿಂದ ಗುರುವಾರ ಆಯೋಜಿಸಿದ್ದ ದಲಿತ ಚಳುವಳಿ ಅಂದು, ಇಂದು, ಮುಂದು ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ರಾಜ್ಯ ಮಟ್ಟದ ಅಧ್ಯಯನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನ ಬದಲಿಸುವ ಮಾತನಾಡುವವರು ಮೊದಲು ದೇಶದ ಆಡಳಿತ ನಿರ್ವಹಣೆಗೆ ಪರ್ಯಾಯ ವ್ಯವಸ್ಥೆ ಏನೆಂಬುದನ್ನು ಹೇಳುತ್ತಿಲ್ಲ. ಸಂವಿಧಾನ ಬದಲಿಸುವ ಕಾರ್ಯ ಸಾಧ್ಯವಾಗುತ್ತಿಲ್ಲ ಎಂದು ಅರಿತು ಅದ್ಭುತವಾಗಿರುವ ಸಂವಿಧಾನವನ್ನು ಅಪ್ರಸ್ತುತಗೊಳಿಸುವ ಹುನ್ನಾರ ನಡೆಸುತ್ತಿರುವ ಬಗ್ಗೆ ಎಲ್ಲರೂ ಎಚ್ಚರಿಕೆವಹಿಸಬೇಕಿದೆ ಎಂದರು.
ದೇಶದ ಸಮಸ್ಯೆಗಳಿಗೆ ಸಂವಿಧಾನವೇ ಕಾರಣ ಎನ್ನುವ ವಾದ ಒಪ್ಪತಕ್ಕದಲ್ಲಿ, ಸಂವಿಧಾನದಲ್ಲಿ ದೋಷಗಳಿದ್ದರೆ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಈವರೆಗೆ 105 ತಿದ್ದುಪಡಿಗಳಾಗಿದ್ದು, ಇನ್ನಷ್ಟು ತಿದ್ದುಪಡಿ ಅಗತ್ಯವಿದ್ದರೆ ಅದನ್ನು ಚರ್ಚಿಸಿ, ಜಾರಿ ಮಾಡಿ ಸಂವಿಧಾನವನ್ನು ಮತ್ತಷ್ಟು ಕ್ರಿಯಾಶೀಲ, ಪ್ರಸ್ತುತಗೊಳಿಸಬಹುದಾಗಿದೆ. ದೋಷ ಇರುವುದು ನಮ್ಮಲ್ಲೆ ಹೊರತು ಸಂವಿಧಾನದಲ್ಲಿ ಅಲ್ಲ ಎಂದು ಅಭಿಪ್ರಾಯ ಪಟ್ಟರು.
ಬುಡಕಟ್ಟು ಸಮುದಾಯದ ಒಬ್ಬ ಮಹಿಳೆ ರಾಷ್ಟ್ರಪತಿಯಾಗಲು ಸಾಧ್ಯವಾಗಿರುವುದು, ಕೋಲಾರದ ಬಡ ರೈತನ ಮಗನಾದ ನಾನು ಹೈಕೋರ್ಟ್ ನ್ಯಾಯಮೂರ್ತಿಯಾಗಲು ಸಾಧ್ಯವಾಗಿರುವುದು ಇದೇ ಸಂವಿಧಾನದ ಶಕ್ತಿಯಿಂದ. ಎಲ್ಲರಿಗೂ ತಮ್ಮ ಹಕ್ಕು, ಬಾಧ್ಯತೆಯನ್ನು ಖಚಿತಗೊಳಿಸುತ್ತಿರುವುದು ಈ ಸಂವಿಧಾನದ ಮೂಲಕವೇ ಆಗಿದೆ ಎಂದರು.
ಈ ದೇಶದ ಪರಿಚಯವಿಲ್ಲದವರು ಸಂವಿಧಾನದ ಆಶಯವನ್ನು ಅರಿಯಲಾರರು. ವಿಭಿನ್ನ ಸಂಸ್ಕøತಿ, ಪರಂಪರೆ, ಭೌಗೋಳಿಕತೆ, ಬಣ್ಣ, ಆಹಾರ ಶೈಲಿ, ಮೌಲ್ಯ, ಭಿನ್ನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕøತಿಕ ಹಿನ್ನೆಲೆಯ ಜನ ಸಮುದಾಯಗಳ ಮಿಶ್ರಣ ಭಾರತವಾಗಿದೆ. ಈ ಎಲ್ಲಾ ವಿಭಿನ್ನತೆಯ ಸೂಕ್ಷ್ಮತೆಗಳನ್ನು ಅರಿತು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಂಗಡಿಗರು ಈ ಸಂವಿಧಾನವನ್ನು ರಚಿಸಿದ್ದಾರೆಂದರು.
ಬಿರಿಯಾನಿ ತಿನ್ನುವವರನ್ನು ಕಂಡರೆ ಆಗಲ್ಲ, ಪೇಟಾ ಅಥವಾ ಟೋಪಿ ಹಾಕುವವರು ಕಂಡರೆ ಆಗಲ್ಲ, ನಿರ್ಧಿಷ್ಟ ಭಾಷೆ ಮಾತನಾಡುವ ಜನ ಕಂಡರೆ ಆಗಲ್ಲ ಎಂಬ ವಾದ ಒಪ್ಪತಕ್ಕದ್ದಲ್ಲ. ಪತ್ನಿ ಅಡುಗೆ ಹಿಡಿಸಲ್ಲ ಎಂದು ಪತಿ, ಅಥವಾ ಪತಿಯ ವೇಷ ಭೂಷಣದಿಂದ ಕಿರಿ,ಕಿರಿಯಾಗುತ್ತದೆ ಎಂದು ಪತ್ನಿ ವಿವಾಹ ವಿಚ್ಚೇದನ ಪಡೆದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಇರುವ ಸಣ್ಣ, ಪುಟ್ಟ ವ್ಯತ್ಯಾಸಗಳನ್ನು ಸಹಿಸಿಕೊಂಡು ಹೋದರೆ ಮಾತ್ರ ಸಂಸಾರ ಸರಿ ದಾರಿಯಲ್ಲಿರುತ್ತದೆ ಎಂದರು.
ಈ ದೇಶ ಸ್ವಾತಂತ್ರ ಪಡೆಯಲು ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿ ಎಲ್ಲಾ ಧರ್ಮ, ಜಾತಿ, ಜನಾಂಗದವರು ರಕ್ತ ಸುರಿಸಿದ್ದಾರೆ. ಎಲ್ಲರ ಶ್ರಮದಿಂದ ಇಂದು ಭಾರತ ಬಲಿಷ್ಠವಾಗುತ್ತಾ ಸಾಗಿದೆ. ಜಾತಿ, ಜನಾಂಗ, ಧರ್ಮದ ಭೇದ ಬೆಳೆಸಿದರೆ ದೇಶ ದುರ್ಬಲಗೊಳ್ಳುತ್ತದೆ ಎಂದರು.
ಸಂವಿಧಾನದ ಆಶಯದಂತೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಆಡಳಿತ ನಿರ್ವಹಣೆ ಮಾಡಬೇಕು. ಈ ಮೂರಲ್ಲಿ ಯಾವುದೇ ಅಂಗವು ಸ್ವೇಚ್ಚಾಚಾರದ ವರ್ತನೆ ತೋರಿದರೆ ಅದು ಸಂವಿಧಾನದ ಆಶಯಕ್ಕೆ ವಿರುದ್ಧ ಎನಿಸುತ್ತದೆ. ಅಡಿಕೆ ಕದ್ದವನಿಗೆ ಮರಣ ದಂಡನೆಯ ಕಠಿಣ ಶಿಕ್ಷೆ ನೀಡಿದರೆ ತಪ್ಪಲ್ಲವೆ ಎಂದು ಪ್ರಶ್ನಿಸಿದರು.
ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಸಂಘಟಕರನ್ನು ಗೌರವಿಸುವ ಜನ ಸಂಘಟನೆಗಳನ್ನು ಒಡೆಯುತ್ತಿದ್ದಾರೆ. ಒಂದೆ ಆಗಿದ್ದಾಗ ಕದಸಂಸ ಶಕ್ತಿಶಾಲಿಯಾಗಿತ್ತು, ಒಡಕು ಮೂಡಿದ್ದರಿಂದ ಸಂಘಟನೆಯ ಶಕ್ತಿ ಕುಂದಿದೆ, ಹಕ್ಕಿಗಾಗಿ ಹೋರಾಟ ಮಾಡುವವರನ್ನು ದೇಶದ್ರೋಹಿಗಳೆಂದು ಬಿಂಬಿಸಿ ಹಿಂಸಿಸುತ್ತಿರುವುದು ಸರಿಯೆ ಎಂದು ಪ್ರಶ್ನಿಸಿದರು.
ಕದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಬೆಂಗಳೂರಿನ ಡಾ.ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯ ಸಂಸ್ಥೆ ಕಾರ್ಯದರ್ಶಿ ಡಾ.ಬಿ.ಎನ್.ಉಮೇಶ್, ಜನ ಪ್ರಕಾಶನದ ಬಿ.ರಾಜಶೇಖರಮೂರ್ತಿ, ಮೈತ್ರಿವನದ ಟ್ರಸ್ಟಿ ರುದ್ರಪ್ಪ ಹನಗವಾಡಿ, ಕದಸಂಸ ಜಿಲ್ಲಾ ಸಂಚಾಲಕ ಬಿ.ದುಗ್ಗಪ್ಪ, ಸಹ ಸಂಚಾಲಕ ನಾಗಪ್ಳರ ಮಂಜುನಾಥ ಇದ್ದರು.