ಕರ್ನಾಟಕ ಬಂದ್‍ಗೆ ಪ್ರತಿಯೊಬ್ಬರು ಬೆಂಬಲ ನೀಡಬೇಕು: ವಾಟಾಳ್ ನಾಗರಾಜ್

ಬೆಂಗಳೂರು, ಸೆ.27: ಕಾವೇರಿ ನದಿ ನೀರು ಸೇರಿದಂತೆ ಇನ್ನಿತರೆ ಜಲ ವಿವಾದ ಬಗೆಹರಿಸಬೇಕೆಂದು ಒತ್ತಾಯಿಸಿ ಸೆ.29ರಂದು ಅಖಂಡ ಕರ್ನಾಟಕ ಬಂದ್‍ಗೆ ಕರೆ ನೀಡಲಾಗಿದ್ದು, ಪ್ರತಿಯೊಬ್ಬರು ಬೆಂಬಲ ನೀಡಬೇಕೆಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ.
ಬುಧವಾರ ನಗರದ ವಿವಿಧೆಡೆ ಬಂದ್ ಕುರಿತು ಜಾಗೃತಿ ಮುಡಿಸಿದ ಅವರು, ರಾಜ್ಯ ಬಂದ್‍ಗೆ ಎಲ್ಲರೂ ಸಹಕಾರ ನೀಡಬೇಕು. ಹೋಟೆಲ್, ಶಾಪಿಂಗ್ ಮಾಲ್‍ಗಳು, ಅಂಗಡಿಗಳು ಬಂದ್ ಮಾಡಬೇಕು. ಈ ಬಂದ್ ಒಂದು ಜಿಲ್ಲೆಗೆ ಮಾತ್ರ ಸೀಮಿತಲ್ಲ, ಕರ್ನಾಟಕದಾದ್ಯಂತ ಬಂದ್ ನಡೆಯಲಿದೆ ಎಂದು ತಿಳಿಸಿದರು.
ಬಂದ್ ದಿನದಂದು ಕನ್ನಡಿಗರ ಪ್ರತಿಭಟನಾ ರ್ಯಾಲಿಯನ್ನು ತಡೆದರೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು. ಇನ್ನೂ, ರಾಜ್ಯಾದ್ಯಂತ ಎಲ್ಲಾ ಸಂಘಟನೆಗಳಿಂದ ಬಂದ್‍ಗೆ ಬೆಂಬಲ ಸಿಗುತ್ತಿದೆ. ಶಾಂತಿಯುತವಾಗಿ ಚಳವಳಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಜತೆಗೆ, ಕರ್ನಾಟಕ ಬಂದ್ ಹಿನ್ನೆಲೆ ಕನ್ನಡ ಚಿತ್ರರಂಗದ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದಾಗಿ ಫಿಲ್ಮ್ ಚೇಂಬರ್ ನಮಗೆ ಭರವಸೆ ನೀಡಿದೆ ಎಂದು ವಿವರಿಸಿದರು.