ಕಾವೇರಿ ಯಾರಿಗೆ ಸೇರಿದ್ದು ? ಯಾರ್ಯಾರ ರಾಜಕೀಯ ಏನೇನು ?
ಸದನದಲ್ಲಿ ಶ್ರೀರಾಮ ರೆಡ್ಡಿ ಪುಸ್ತಕದ ಆಯ್ದ ಭಾಗ…
PHOTO : newindianexpress.com
1995 ರಲ್ಲಿ ಎಚ್ ಡಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಕಾವೇರಿ ನೀರಿನ ಹಂಚಿಕೆ ವಿಷಯದಲ್ಲಿ ಯಾವ ನಿಲುವು ತೆಗೆದುಕೊಂಡಿದ್ದರು? ಅದಕ್ಕೂ ಮೊದಲು ವಿಪಕ್ಷ ನಾಯಕರಾಗಿದ್ದಾಗ ಯಾವ ನಿಲುವು ಹೊಂದಿದ್ದರು? ಕಾಂಗ್ರೆಸ್-ಬಿಜೆಪಿ-ದಳ ಕಾವೇರಿ ನೀರು ರಾಜಕೀಯವನ್ನು ಹೇಗೆ ಮಾಡುತ್ತಲೇ ಬಂದಿದೆ ಎಂಬುದರ ಬಗ್ಗೆ 30.08.1995 ರಂದು ವಿಧಾನಸಭೆಯಲ್ಲಿ ಸಿಪಿಐಎಂ ಶಾಸಕ ಶ್ರೀರಾಮ ರೆಡ್ಡಿಯವರು ಭಾಷಣ ಮಾಡಿದ್ದಾರೆ. ಸದನದ ದಾಖಲೆಗಳನ್ನು ಆಧರಿಸಿದ "ಸದನದಲ್ಲಿ ಶ್ರೀರಾಮ ರೆಡ್ಡಿ" (ಸಂಪಾದಕರು : ನವೀನ್ ಸೂರಿಂಜೆ) ಪುಸ್ತಕದ ಆಯ್ದ ಭಾಗ ಇಲ್ಲಿದೆ.
ಜಿ ವಿ ಶ್ರೀರಾಮ ರೆಡ್ಡಿ : ದುರಾದೃಷ್ಟವಶಾತ್ ಕಾವೇರಿ ನೀರಿನ ವಿಷಯವನ್ನು ಮತ್ತು ಅದರ ಸಮಸ್ಯೆಯನ್ನು ಪರಿಹಾರ ಮಾಡುವುದಕ್ಕೆ ನಮ್ಮ ರಾಜ್ಯ ಮತ್ತು ಕೇಂದ್ರ ಸರಕಾರ ಎಷ್ಟರ ಮಟ್ಟಿಗೆ ಪ್ರಯತ್ನ ಪಟ್ಟಿದ್ದೇವೋ ಅದಕ್ಕಿಂತ ಹೆಚ್ಚಿಗೆ ಎಲ್ಲರೂ ರಾಜಕೀಯ ಮಾಡುವುದಕ್ಕೆ ಪ್ರಯತ್ನ ಪಟ್ಟಿದ್ದಾರೆ. ಹಲವಾರು ವರ್ಷಗಳಿಂದ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದವರು ಅಥವಾ ವಿರೋಧ ಪಕ್ಷದಲ್ಲಿದ್ದವರು ಪ್ರಾಮಾಣಿಕವಾದಂತಹ ಪ್ರಯತ್ನ ಮತ್ತು ಸೌಹಾರ್ದಯುತವಾದಂತಹ ವಾತಾವರಣದಲ್ಲಿ ಸೃಷ್ಟಿಸುವುದಕ್ಕೆ ಸಾಧ್ಯತೆ ಇತ್ತು. ಆದರೆ 1972 ರಿಂದ ವಿವಾದವನ್ನು ಜೀವಂತವಿಟ್ಟಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡು ಮದ್ಯೆ 1930 ರಲ್ಲಿ ಆಗಿದ್ದಂತಹ ಅಗ್ರಿಮೆಂಟ್ 1972 ರಲ್ಲಿ ಮುಕ್ತಾಯವಾಯಿತು. 1972 ರಿಂದಲೂ ಕೂಡ ಕಾವೇರಿ ನೀರಿನ ಬಗ್ಗೆ ಚರ್ಚೆ ಮಾಡುತ್ತಲೇ ಇದ್ದೇವೆ.
ಆಡಳಿತ ಪಕ್ಷವಿರಬಹುದು, ವಿರೋಧ ಪಕ್ಷವಿರಬಹುದು. ಹಿಂದೆ ಅಧಿಕಾರದಲ್ಲಿದ್ದವರು ಈಗ ವಿರೋಧ ಪಕ್ಷದಲ್ಲಿದ್ದಾರೆ. ಈಗ ಅಧಿಕಾರದಲ್ಲಿದ್ದವರು ಹಿಂದೆ ವಿರೋಧ ಪಕ್ಷದಲ್ಲಿದ್ದರು. ಆಗ ಅವರ ಧೋರಣೆ ಹೇಗೆ ಇತ್ತು? ಅವರು ಅಧಿಕಾರದಲ್ಲಿದ್ದ ಪರಿಸ್ಥಿತಿಯಲ್ಲಿ ಕಾವೇರಿ ನೀರಿನ ಬಗ್ಗೆ ಅವರು ತೆಗೆದುಕೊಂಡಿರುವ ನಿಲುವೇ ಬೇರೆ. ಅಧಿಕಾರ ಬಿಟ್ಟು ವಿರೋಧ ಪಕ್ಷಕ್ಕೆ ಬಂದು ತಕ್ಷಣ ಅವರು ತೆಗೆದುಕೊಳ್ಳುವ ನಿಲುವು ಬೇರೆ. ಇಡೀ ದೇಶದಲ್ಲಿ ಸಮಗ್ರವಾದ ರಾಷ್ಟ್ರೀಯ ಜಲನೀತಿಯನ್ನು ಇದುವರೆಗೆ ರೂಪಿಸದೇ ಇರುವ ಕಾರಣಕ್ಕೋಸ್ಕರ ಈ ಮೂಲಭೂತವಾದ ತದ್ವಿರುದ್ಧವಾದ ವಿಪರ್ಯಾಸಗಳು ಉಂಟಾಗುತ್ತಿವೆ.
ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ಅಧಿಕಾರದಲ್ಲಿದ್ದಾಗ ಒಂದು ಮಾತು ಹೇಳುತ್ತಾರೆ, ಅಧಿಕಾರದಲ್ಲಿ ಇಲ್ಲದೆ ಇದ್ದಾಗ ಬೇರೆಯದೇ ಮಾತು ಹೇಳುತ್ತಾರೆ. ಅಧಿಕಾರದಲ್ಲಿ ಇಲ್ಲದೇ ಇದ್ದಾಗ ಎಚ್ ಡಿ ದೇವೇಗೌಡರು ಟ್ರಿಬ್ಯುನಲ್ ಬಗ್ಗೆ ಏನೆಲ್ಲಾ ಮಾತನಾಡಿದರು ಎಂಬುದನ್ನು ಪತ್ರಿಕೆಯನ್ನು ತಿರುವಿ ಹಾಕಿ ಗಮನಿಸಿ. ಆದರೆ ಅಧಿಕಾರ ಸಿಕ್ಕ ತಕ್ಷಣ ಅವರ ಧೋರಣೆ ಬದಲಾವಣೆಯಾಗಿ ಬಿಟ್ಟಿದೆ.
ಈಗ 5 ಟಿಎಂಸಿ ನೀರನ್ನು ಕೊಡಬೇಕು ಎಂದಾಗ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿದೆ ಎಂಬ ಪ್ರಶ್ನೆ ಮುನ್ನಲೆಗೆ ಬಂದಿದೆ. ನನಗೆ ಗೊತ್ತಿರುವ ಪ್ರಕಾರ ವೀರೇಂದ್ರಪಾಟೀಲರ ಸರಕಾರ ಮತ್ತು ಬಂಗಾರಪ್ಪನವರ ಸರಕಾರ ಮಾತ್ರ ತಮಿಳುನಾಡಿಗೆ ನೀರು ಕೊಡಲಿಲ್ಲ. ವೀರೇಂದ್ರಪಾಟೀಲ ಮತ್ತು ಬಂಗಾರಪ್ಪನವರ ಸರಕಾರಗಳನ್ನು ಬಿಟ್ಟರೆ ಗುಂಡೂರಾಯರ ಮತ್ತು ದೇವರಾಜ ಅರಸು ಕಾಲದಿಂದ ತಮಿಳುನಾಡಿಗೆ ನೀರು ಕೊಡುತ್ತಾ ಬಂದಿದ್ದರು. ಅದು ಅಧಿಕೃತವಾದ ಆಜ್ಞೆ ಮೇರೆಗೆ ಕೊಟ್ಟಿದ್ದಾರೋ ಅಥವಾ ಕಾನೂನು ಮೇರೆಗೆ ಕೊಟ್ಟಿದ್ದಾರೋ ಅಥವಾ ತೀರ್ಪಿನ ಪ್ರಕಾರ ಕೊಟ್ಟಿದ್ದಾರೋ ಎಂಬುದು ಬೇರೆ ಪ್ರಶ್ನೆ. ಒಟ್ಟಿನಲ್ಲಿ ತಮಿಳುನಾಡಿಗೆ ನೀರು ಕೊಟ್ಟಿದ್ದಾರೆ. ಇವತ್ತು ನಮ್ಮಲ್ಲಿ ನೀರು ಕಡಿಮೆಯಾಗಿದೆ ಎಂಬ ಕಾರಣಕ್ಕೋಸ್ಕರ ನೀರು ಕೊಡುವುದು ತಪ್ಪು ಎನ್ನುತ್ತಿದ್ದೇವೆ.
ನಾವು ನೀರಾವರಿ ಸಮಸ್ಯೆಯನ್ನು ನೋಡುವ ದೃಷ್ಟಿಯಲ್ಲಿ ದೋಷವಿದೆ. ಬೇರೆ ಬೇರೆ ದೇಶಗಳಲ್ಲಿ ನೀರು ಎಂಬುದು ರಾಷ್ಟ್ರೀಯ ಸಂಪತ್ತು ಎಂದು ತೀರ್ಮಾನ ಮಾಡಿದ್ದಾರೆ. ಇದರ ಬಗ್ಗೆ ಯಾರಿಗೂ ಯಾವ ರೀತಿಯ ಅಧಿಕಾರ ಇಲ್ಲ. ಯಾವುದೇ ದೇಶದಲ್ಲಿ ತೊಟ್ಟು ನೀರು ಇದ್ದರೂ ಕೂಡ, ಒಂದು ಹನಿ ನೀರು ಇದ್ದರೂ ಕೂಡ ಅದು ರಾಷ್ಟ್ರೀಯ ಸಂಪತ್ತು. ನೀರು ಎಂಬುದು ಯಾವುದೋ ಒಂದು ಜಿಲ್ಲೆಯ, ಯಾವುದೋ ಒಂದು ರಾಜ್ಯದ ಸಂಪತ್ತು ಅಲ್ಲ. ಆದರೆ ದುರಾದೃಷ್ಟವಶಾತ್ ನಮ್ಮ ದೇಶದಲ್ಲಿ ಅಂತಹ ನೀತಿ ಬರಲಿಲ್ಲ. ಕಾವೇರಿ ಸಮಸ್ಯೆಯನ್ನು ನಾವೆಲ್ಲರೂ ನೋಡುವ ದೃಷ್ಟಿ ರಾಜಕೀಯ ದೃಷ್ಟಿಯಷ್ಟೆ. ಕರ್ನಾಟಕ ರಾಜ್ಯದ ಹಿತ, ರೈತರ ಹಿತ ಮತ್ತು ದೇಶದ ಹಿತ ಇವೆಲ್ಲವನ್ನು ನೋಡುವ ದೃಷ್ಟಿಯಲ್ಲೇ ದೋಷವಿದೆ. ತಮಿಳುನಾಡಿನಲ್ಲಿರುವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ಕಾವೇರಿ ಬಗ್ಗೆ ಏನು ನಿಲುವು ತೆಗೆದುಕೊಂಡಿದೆ? ಕರ್ನಾಟಕದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ಕಾವೇರಿ ಬಗ್ಗೆ ಏನು ನಿಲುವು ತೆಗೆದುಕೊಂಡಿದೆ? ಒಂದೇ ಪಕ್ಷ ಎರಡು ರಾಜ್ಯಗಳಲ್ಲಿ ಪ್ರತ್ಯೇಕ ನಿಲುವು ಹೇಗೆ ತೆಗೆದುಕೊಳ್ಳಲು ಸಾಧ್ಯ ? ನಮ್ಮದು ರಾಷ್ಟ್ರೀಯ ಪಕ್ಷ. ನಮ್ಮ ದೃಷ್ಟಿ ರಾಷ್ಟ್ರದ ದೃಷ್ಟಿ ಮತ್ತು ರಾಜ್ಯದ ದೃಷ್ಟಿ ಎರಡೂ ಇರಬೇಕು. ಆದರೆ ಒಂದೊಂದು ರಾಜ್ಯದಲ್ಲಿ ಒಂದೊಂದು ನಿಲುವು ತೆಗೆದುಕೊಳ್ಳುವುದು ಇಬ್ಬಂದಿತನದ ಪರಮಾವಧಿ. ನಮಗೆಲ್ಲರಿಗೂ ದೇಶ ಮತ್ತು ರಾಜ್ಯದ ಬಗ್ಗೆ ಒಂದು ಸಮಗ್ರವಾದ ದೃಷ್ಟಿ ಇರಬೇಕು.
ಎಂ. ಮಲ್ಲಿಕಾರ್ಜುನ ಖರ್ಗೆ : ಕಾವೇರಿ ಬಗ್ಗೆ ನಿಮ್ಮ ಸಿಪಿಐಎಂ ಪಕ್ಷದ ನಿಲುವು ಏನಿದೆ ಎಂಬುದನ್ನು ಹೇಳಿ?
ಜಿ ವಿ ಶ್ರೀರಾಮ ರೆಡ್ಡಿ : ಸುತ್ತಿ ಬಳಸಿ ಮಾತನಾಡುವ ಅವಶ್ಯಕತೆ ನನಗೆ ಇಲ್ಲ. ಏಕೆಂದರೆ ನಾನು ಕರ್ನಾಟಕದ ಮುಖ್ಯಮಂತ್ರಿಯಾಗುವುದಿಲ್ಲ. ನನ್ನ ಪಾರ್ಟಿಯ ಯಾರೂ ಕೂಡಾ ರಾಜ್ಯದಲ್ಲಿ ಸಧ್ಯಕ್ಕೆ ಸಿಎಂ ಆಗುವುದಿಲ್ಲ. ಬಹುಶಃ ಅಂತಹ ಆಸೆ ಖರ್ಗೆಯವರಿಗೆ ಇನ್ನೂ ಇರಬಹುದು. ಹಾಗಾಗಿ ನಾನು ನೇರವಾಗಿ ಹೇಳುತ್ತಿದ್ದೇನೆ. ಕಾವೇರಿ ವಿಷಯದಲ್ಲಿ ಕಾಂಗ್ರೆಸ್ ಬಿಜೆಪಿಯದ್ದು ಇಬ್ಬಂದಿತನದ ಪರಮಾವಧಿ. ಕಾವೇರಿ ನೀರಿನ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ. ನೀರಿನ ವಿಷಯದ ಬಗ್ಗೆ ವಸ್ತುಸ್ಥಿತಿ ಅಂಶಗಳ ಆಧಾರದ ಮೇಲೆ ಎರಡೂ ರಾಜ್ಯಗಳು ಮಾತುಕತೆ ಮುಖಾಂತರ ಆ ಸಮಸ್ಯೆಯನ್ನು ಪರಿಹಾರ ಮಾಡಬೇಕೆಂದು ನಮ್ಮ ಸಿಪಿಐಎಂ ಪಕ್ಷದ ನಿಲುವು. ಅದನ್ನು ಯಾರಾದರೂ ಒಪ್ಪಬಹುದು, ಬಿಡಬಹುದು. ನಾವು ಒಂದೊಂದು ಕಾಲಕ್ಕೆ ತಕ್ಕಂತೆ ಒಂದೊಂದು ರೀತಿ ನಿಲುವು ತೆಗೆದುಕೊಳ್ಳುವುದು ಸರಿಯಲ್ಲ. ಹಿಂದಿನ ಎಲ್ಲಾ ಸರ್ಕಾರಗಳು ತಮಿಳುನಾಡಿಗೆ ನೀರು ಕೊಟ್ಟಿದೆ. ನಾನಾಗಲೇ ಹೇಳಿದಂತೆ ವಿರೇಂದ್ರ ಪಾಟೀಲ್, ಬಂಗಾರಪ್ಪ ಹೊರತುಪಡಿಸಿ ದೇವರಾಜ ಅರಸ್, ಗುಂಡೂರಾವ್, ವೀರಪ್ಪ ಮೊಯಿಲಿ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟಿದೆ. ಆದ್ದರಿಂದ ನಾನು ನಮ್ಮ ಪಕ್ಷದ ಅಭಿಪ್ರಾಯವನ್ನು ಹೇಳುತ್ತಿದ್ದೇನೆ. ಟ್ರಿಬ್ಯನಲ್ ನ ಮಧ್ಯಂತರ ತೀರ್ಪನ್ನಾಗಲೀ, ಸುಪ್ರಿಂ ಕೋರ್ಟ್ ತೀರ್ಪನ್ನಾಗಲೀ ಉಲ್ಲಂಘನೆ ಮಾಡಬೇಕು ಎಂದು ಹೇಳುವುದು ಸರಿಯಿಲ್ಲ. ಈ ತೀರ್ಪನ್ನು ಉಲ್ಲಂಘನೆ ಮಾಡಬೇಕು ಎಂದಾದರೆ ಎಲ್ಲಾ ತೀರ್ಪುಗಳನ್ನೂ ಉಲ್ಲಂಘನೆ ಮಾಡಬೇಕಾಗುತ್ತದೆ. ಅದು ಸರಿಯಾದ ನಿಲುವಲ್ಲ.
ವಾಟಾಳ್ ನಾಗರಾಜ್ : ತಾವು ವಾದ ಮಾಡಿ. ಆದರೆ ಕರ್ನಾಟಕದ ಹಿತಕ್ಕೆ ನಿಮ್ಮ ಮಾತು ಧಕ್ಕೆಯಾಗುತ್ತದೆ.
ಜಿ ವಿ ಶ್ರೀರಾಮ ರೆಡ್ಡಿ : ಹಿತರಕ್ಷಣೆ ಹೆಸರಲ್ಲಿ ಮಾಡಿರುವ ರಾಜಕೀಯ ಏನು ಎಂಬುದನ್ನೂ ಇಲ್ಲಿ ಹೇಳಬೇಕಾಗುತ್ತದೆ.
ವಾಟಾಳ್ ನಾಗರಾಜ್ : ರಾಜಕೀಯ ಏನು ಹೇಳಿ ಬಿಡಿ
ಜಿ.ವಿ. ಶ್ರೀರಾಮರೆಡ್ಡಿ : ಹಿತರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ರಾಜಕೀಯವನ್ನೇ ಇಷ್ಟೊತ್ತು ಮಾತನಾಡಿದ್ದು. ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ ನೀವು ನಿಮ್ಮ ಅಭಿಪ್ರಾಯ ಹೇಳಿ
ವಾಟಾಳ್ ನಾಗರಾಜ್ : ನಿಮ್ಮ ಅಭಿಪ್ರಾಯ ಕರ್ನಾಟಕದ ವಿರುದ್ಧ ಇದ್ದರೆ ನಾನು ಸುಮ್ಮನೆ ಕುಳಿತುಕೊಳ್ಳಲೇ ಇಲ್ಲಿ?
ಜಿ.ವಿ. ಶ್ರೀರಾಮರೆಡ್ಡಿ : ಕಾವೇರಿಯಲ್ಲಿ ತಮಿಳುನಾಡಿಗೆ ಮಾತ್ರವಲ್ಲ ಕೇರಳಕ್ಕೂ ಪಾಲಿದೆ. ಕೇರಳ, ಪಾಂಡಿಚೇರಿ, ಮದ್ರಾಸ್, ಕರ್ನಾಟಕದ ಎಲ್ಲರಿಗೂ ಕಾವೇರಿ ನದಿ ಮೇಲೆ ಹಕ್ಕಿದೆ. ಅದನ್ನು ಇಲ್ಲ ಎಂದು ಹೇಳುವುದಕ್ಕೆ ಯಾರಿಗೂ ಹಕ್ಕಿಲ್ಲ.
ವಿಶ್ವೇಶ್ವರ ಹೆಗಡೆ ಕಾಗೇರಿ : ಶ್ರೀರಾಮರೆಡ್ಡಿಯವರಿಗೆ ಏನಾಗಿದೆ ಎಂದರೆ ರಷ್ಯಾ ಒಡೆದು ಚೂರುಚೂರಾದ ಮೇಲೆ ಎಲ್ಲಿಗೆ ಹೋಗಬೇಕು ಅವರಿಗೆ ಗೊತ್ತಾಗುತ್ತಿಲ್ಲ. ಚೀನಾಕ್ಕೆ ಹೋಗಬೇಕೋ, ಯಾವ ದೇಶಕ್ಕೆ ಹೋಗಬೇಕೋ ಎಂದು ಗೊಂದಲದಲ್ಲಿದ್ದಾರೆ. ವಾಟಾಳ್ ನಾಗರಾಜ್ ರವರೇ, ನೀವು ತಲೆ ಕೆಡಿಸಿಕೊಳ್ಳುವುದು ಬೇಡ.
ಜಿ.ವಿ. ಶ್ರೀರಾಮರೆಡ್ಡಿ : ಗೊಂದಲ ನಿಮಗಾಗಿದೆ. ನಮ್ಮನ್ನು ಏತಕ್ಕೆ ಗೊಂದಲದಲ್ಲಿ ಸಿಕ್ಕಿಸುತ್ತೀರಿ? ಬಿಜೆಪಿಯವರಿಗೆ ಎಲ್ಲೆಲ್ಲೂ ಏನೇನೋ ಕಾಣುತ್ತದೆ ಪಾಪ. ಆ ಕಡೆ ಮಥುರಾ ಕಾಣುತ್ತೆ. ಈ ಕಡೆ ಕಾಶಿ ಕಾಣುತ್ತೆ. ಈ ಕಡೆ ಅಯೋಧ್ಯೆ ಕಾಣುತ್ತೆ. ಅಯೋದ್ಯೆಯೋ, ಮಥರಾವೋ ಎಂಬ ಗೊಂದಲದಲ್ಲಿ ಏನೇನೋ ಮಾತಾಡ್ತಾ ಇದ್ದಾರೆ. ಅಪ್ರಸ್ತುತವಾದ ವಿಷಯಗಳನ್ನು ಮಾತನಾಡುವುದರಿಂದ ಏನೂ ಪ್ರಯೋಜನವಾಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆ ಎನ್ನುವವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೃಷ್ಟಿಯಾಗಿರುವ ಟ್ರಿಬ್ಯುನಲ್ ಮೇಲೆ ಮಾತ್ರ ನಂಬಿಕೆ ಇಲ್ಲವೇ? ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರಿಗೆ ಪಾರ್ಲಿಮೆಂಟ್, ಸುಪ್ರಿಂ ಕೋರ್ಟ್ ತೀರ್ಪುಗಳ ಬಗ್ಗೆ ನಂಬಿಕೆ ಇಲ್ಲ. ಇವರು ಪ್ರಜಾಪ್ರಭುತ್ವದ ಬಗ್ಗೆ ಬಹಳ ಮಾತನಾಡುತ್ತಾರೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ನ್ಯಾಯಾಂಗದ ತೀರ್ಪು ಗೌರವಿಸುವುದಿಲ್ಲ. ಇದು ಇಬ್ಬಂದಿತನ. ಆದ್ದರಿಂದ ಈ ಮಧ್ಯಂತರ ಆಜ್ಞೆಯನ್ನು ಪಾಲಿಸಬೇಕು. ಆದ್ದರಿಂದ ನೀರಿನ ವಿಷಯದಲ್ಲಿ ಭಾವೋದ್ವೇಗಕ್ಕೆ ಒಳಗಾಗುವುದು ಸರಿಯಲ್ಲ. ಕಾವೇರಿಯ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಸೌಹಾರ್ದಯುತವಾದ ವಾತಾವರಣದಲ್ಲಿ ಸಮಸ್ಯೆ ಪರಿಹಾರ ಆಗಬೇಕು. ಆದ್ದರಿಂದ 5 ಟಿಎಂಸಿ ನೀರು ಕೊಡಬೇಕು ಎನ್ನುವ ಕಾರಣಕ್ಕಾಗಿ ರಾಜಕೀಯ ಮಾಡುವುದು ಬಿಟ್ಟು ನಿಜವಾದ ಸಮಸ್ಯೆಯನ್ನು ಪರಿಹಾರ ಮಾಡುವುದಕ್ಕೆ ನಾವೆಲ್ಲರೂ ಒಟ್ಟಾಗಿ ಪ್ರಯತ್ನ ಮಾಡಬೇಕೆಂದು ನನ್ನ ಮತ್ತು ನನ್ನ ಪಕ್ಷದ ಅಭಿಪ್ರಾಯ.
ಪುಸ್ತಕ : ಸದನದಲ್ಲಿ ಶ್ರೀರಾಮ ರೆಡ್ಡಿ
ಸಂಪಾದಕರು : ನವೀನ್ ಸೂರಿಂಜೆ
ಪ್ರಕಾಶಕರು : ಅಭಿರುಚಿ ಪ್ರಕಾಶನ
ಮಾರಾಟ : ಕ್ರೀಯಾ ಪ್ರಕಾಶನ