ಪವರ್ ಟಿವಿ ಪ್ರಸಾರ ಸ್ಥಗಿತಕ್ಕೆ ನೀಡಿದ್ದ ಆದೇಶ ವಿಸ್ತರಣೆ
ಪ್ರಸಾರ ಪರವಾನಗಿ ನವೀಕರಣದ ಬಗ್ಗೆ ತೀರ್ಮಾನಿಸಲು ಕೇಂದ್ರಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು : ಪರವಾನಗಿ ನವೀಕರಿಸದ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಪವರ್ ಟಿವಿ ತನ್ನ ಕಾರ್ಯಕ್ರಮಗಳ ಪ್ರಸಾರ ಸ್ಥಗಿತಗೊಳಿಸಬೇಕೆಂದು ನೀಡಿದ್ದ ಆದೇಶವನ್ನು ಹೈಕೋರ್ಟ್ ಮತ್ತೆ ವಿಸ್ತರಣೆ ಮಾಡಿದೆ.
ಪವರ್ ಟಿವಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು. ಈ ವೇಳೆ ಪವರ್ ಟಿವಿ ಪರ ವಕೀಲರು ವಾದ ಮಂಡಿಸಿ, ಕೇಂದ್ರ ಸರಕಾರ ಶೋಕಾಸ್ ನೋಟಿಸ್ ನೀಡಿತ್ತು. ಅದಕ್ಕೆ ಪವರ್ ಟಿವಿ ಉತ್ತರವನ್ನೂ ನೀಡಿದೆ. ಅದರೆ ಇದರ ಬಗ್ಗೆ ಕೇಂದ್ರ ಸರಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು.
ವಾದ ಆಲಿಸಿದ ಹೈಕೋರ್ಟ್, ಶೋಕಾಸ್ ನೋಟಿಸ್ ಜೊತೆಗೆ ಪರವಾನಗಿ ನವೀಕರಣದ ಬಗ್ಗೆ ತೀರ್ಮಾನಿಸಲು ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ. ಈಗಾಗಲೇ ಶೋಕಾಸ್ ನೋಟಿಸ್ ಗೆ ಉತ್ತರಿಸಿರುವ ಪವರ್ ಟಿವಿಯ ಉತ್ತರ ಪರಿಗಣಿಸಿ ಪರವಾನಗಿ ನವೀಕರಿಸಬೇಕೇ ಬೇಡವೇ ಎಂಬುದನ್ನು ಕೇಂದ್ರ ಸರಕಾರ 6 ವಾರಗಳಲ್ಲಿ ತೀರ್ಮಾನಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಅಲ್ಲಿಯವರೆಗೆ ಪವರ್ ಟಿವಿ ಪ್ರಸಾರಕ್ಕೆ ವಿಧಿಸಿದ್ದ ನಿರ್ಬಂಧವನ್ನು ಹೈಕೋರ್ಟ್ ಮುಂದುವರೆಸಿದೆ.