ಕಡೂರು ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ ಆರೋಪ; ಮಹಿಳಾ ಪೊಲೀಸ್ ಪೇದೆ ಅಮಾನತು
ಅಮಾನತುಗೊಂಡಿರುವ ಮಹಿಳಾ ಪೇದೆ
ಚಿಕ್ಕಮಗಳೂರು, ಆ.12: ಕಡೂರಿನ ಕಾಂಗ್ರೆಸ್ ಶಾಸಕ ಕೆ.ಎಸ್.ಆನಂದ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ ಆರೋಪದಲ್ಲಿ ಮಹಿಳಾ ಪೊಲೀಸ್ ಪೇದೆಯನ್ನು ಅಮಾನತಗೊಳಿಸಿ ಎಸ್ಪಿ ಆದೇಶಿಸಿದ್ದಾರೆ.
ಕಡೂರು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಪೇದೆ ಲತಾ ಅವರನ್ನು ಇತ್ತೀಚೆಗೆ ತರೀಕೆರೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು, ಈ ವರ್ಗಾವಣೆಗೆ ಕಡೂರು ಶಾಸಕ ಕೆ.ಎಸ್.ಆನಂದ್ ಅವರೇ ಕಾರಣ ಎಂದು ಪೇದೆ ಲತಾ ಆರೋಪಿಸಿದ್ದು, ಶಾಸಕರ ವಿರುದ್ಧ ಅಸಮಾಧಾನಗೊಂಡಿದ್ದ ಅವರು ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲೂ ಪೋಸ್ಟ್ ಹಾಕಿದ್ದರು. ಕೆಲ ದಿನಗಳ ಹಿಂದೆ ತನ್ನ ವರ್ಗಾವಣೆ ವಿರೋಧಿಸಿ ಕಡೂರು ಠಾಣಾಧಿಕಾರಿ ವಿರುದ್ಧವೂ ಅಸಮಾಧಾನ ಹೊರಹಾಕಿದ್ದರು ಎಂದು ತಿಳಿದು ಬಂದಿದೆ.
ಶಾಸಕರ ವಿರುದ್ಧ ವಾಟ್ಸಪ್ ಸ್ಟೇಟಸ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದ ಲತಾ, ʼʼನನಗೇನಾದರು ತೊಂದರೆ ಅದರೆ ಕಡೂರು ಶಾಸಕ ಕಾರಣ, ಕಡೂರು ಎಂಎಲ್ಎಗೆ ನನ್ನ ಧಿಕ್ಕಾರʼʼ ಎಂದು ಬರೆದಿದ್ದರು ಎನ್ನಲಾಗಿದೆ.
ಪೇದೆಯ ಈ ಅಶಿಸ್ತಿನ್ನು ಗಮನಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಹಿಳಾ ಪೇದೆ ಲತಾ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.