ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿ; ಪ್ರಕರಣ ದಾಖಲು
ಶಿವಮೊಗ್ಗ ನ.27 : ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಗ್ರೂಪ್ ತಯಾರಿಸಿ ಅದರಲ್ಲಿ ಸಚಿವರ ಹಾಗೂ ಸಚಿವರ ಪಕ್ಷಕ್ಕೆ ವಿರುದ್ಧವಾದ ಫೋಸ್ಟ್ ಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಪ್ರಕರಣ ಸಂಬಂಧ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಯೋಜಕರಾದ ಜಿ.ಡಿ ಮಂಜುನಾಥ್ ದೂರು ನೀಡಿದ್ದಾರೆ.
ನ.27(ಸೋಮವಾರ)ರಂದು ಫೇಕ್ ಐಡಿ ಪ್ರಕರಣ ಬೆಳಕಿಗೆ ಬಂದಿದೆ. ಸಚಿವರ ಹೆಸರಿನಲ್ಲಿ ‘ಶ್ರೀ ಮಾನ್ಯ ಮಧು ಬಂಗಾರಪ್ಪ ಜಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು’ ಎಂಬ ಹೆಸರಿನ ನಕಲಿ ಫೇಸ್ಬುಕ್ ಗ್ರೂಪ್ ಕ್ರಿಯೇಟ್ ಮಾಡಿರುವುದು ಕಂಡು ಬಂದಿದೆ.
ಈ ಗ್ರೂಪ್ ನ ಡಿಪಿಯಲ್ಲಿ ಮಧು ಬಂಗಾರಪ್ಪ ಅವರ ಪೋಟೊ ಹಾಕಿದ್ದು, ಇದರಲ್ಲಿ 58ಕೆ ಫಾಲೋವರ್ಸ್ ಇದ್ದಾರೆ. ಅಲ್ಲದೆ ಈ ಪೇಸ್ಬುಕ್ ಗ್ರೂಪ್ ನಲ್ಲಿ ಕುಂದಾಪುರ ವಿರಾಟ್ ಎಂಬ ಹೆಸರಿನ ಫೇಸ್ ಬುಕ್ ಬಳಕೆದಾರರು ಅಚ್ಚೆದಿನ್ ವಿಚಾರವಾಗಿ ಸಚಿವರ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧವಾದಂತಹ ಪೋಸ್ಟ್ ಹಾಕಿದ್ದಾರೆ.
ಫೋಸ್ಟ್ ನಲ್ಲಿ ‘ಯೇ ಹೈ ಅಚ್ಚೇ ದಿನ್ʼ. ದೇಶವನ್ನು ನುಂಗಿ ನೀರು ಕುಡಿದಿದ್ದ ಕಾಂಗ್ರೆಸ್ ನ ಬಹಳ ಜನ ಅಚ್ಚೇ ದಿನ್ ಎಲ್ಲಿ ಅಂತ ಕೇಳಿದ್ರು. ಇದು ಅಚ್ಚೇ ದಿನ್, ನೋಡಿ ಖುಷಿ ಪಡಿ ಎಂದು ಬರೆದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಪೋಟೊ ಬಳಸಿ ಅವಹೇಳನ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಾಂಗ್ರೆಸ್ ಪಕ್ಷದ ನಾಯಕರು, ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಅಪಹಾಸ್ಯ ಮಾಡಿ ಹಲವು ಪೋಸ್ಟ್ ಗಳನ್ನು ‘ಶ್ರೀ ಮಾನ್ಯ ಮಧು ಬಂಗಾರಪ್ಪ ಜಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು’ಎಂಬ ಫೇಸ್ ಬುಕ್ ಗ್ರೂಪ್ ಗೆ ಟ್ಯಾಗ್ ಮಾಡಲಾಗಿದೆ ಎಂದು ದೂರಲಾಗಿದೆ.
ಈ ಸಂಬಂಧ ನಕಲಿ ಅಕೌಂಟ್ ತಯಾರಿಸಿದ ಆರೋಪ ಸೇರಿದಂತೆ ಮಧು ಬಂಗಾರಪ್ಪ ಅವರಂತೆ ನಟಿಸಿ ಸಚಿವರೇ ಈ ರೀತಿ ಫೇಸ್ಬುಕ್ ಅಕೌಂಟ್ ಕ್ರಿಯೇಟ್ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ನಾಯಕರು, ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳನ್ನು ಅಪಹಾಸ್ಯ ಮಾಡಿ ಹಲವು ಪೋಸ್ಟ್ಗಳನ್ನು ಹಾಕುತ್ತಿರುವಂತೆ ಖಾತೆಯನ್ನು ಉಪಯೋಗಿಸಲಾಗಿದೆ.
ಈ ಮೂಲಕ ಸಚಿವರಿಗೆ ಕೆಟ್ಟ ಹೆಸರು ಬರುವಂತೆ, ಅವರ ಘನತೆಗೆ ಧಕ್ಕೆ ತರುವಂತೆ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಐಟಿ ಆಕ್ಟ್ ಅಡಿ ಸಿಇಎನ್ ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದೆ.