ಕೊಡಗು | ರಸ್ತೆಗೆ ಅಡ್ಡಲಾಗಿ ಬಿದ್ದ ಮರ; ಸಕಾಲಕ್ಕೆ ಚಿಕಿತ್ಸೆ ಕೊಡಿಸಲಾಗದೆ ಮಗು ಮೃತ್ಯು
► ತೋಟದ ಮಾಲಕ, ಪಿಡಿಒ ವಿರುದ್ಧ ದೂರು
ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮರ
ಸೋಮವಾರಪೇಟೆ (ಕೊಡಗು): ತಾಲೂಕಿನ ಬೇಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಸುಬೂರು ಗ್ರಾಮದಲ್ಲಿ ಸಕಾಲದಲ್ಲಿ ಚಿಕಿತ್ಸೆ ಕೊಡಿಸದ ಕಾರಣ ಹಸಿಗೂಸೊಂದು ಸಾವಿಗೀಡಾಗಿರುವ ಘಟನೆ ರವಿವಾರ ರಾತ್ರಿ ವರದಿಯಾಗಿದೆ.
ಕುಸುಬೂರು ಗ್ರಾಮದಿಂದ ಕರ್ಕಳ್ಳಿ ಗ್ರಾಮವನ್ನು ಸಂಪರ್ಕಿಸುವ ರಸ್ತೆಯಲ್ಲಿ ಒಣಗಿದ ಬಸಿರಿ ಮರದೊಂದಿಗೆ ಬೈನೆ ಮತ್ತು ಸಿಲ್ವರ್ ಮರ ಬಿದ್ದು ಸಂಚಾರಕ್ಕೆ ತೊಡಕು ಉಂಟಾಗಿತ್ತು. ಶನಿವಾರದಂದು ಮರ ಬಿದ್ದಿದ್ದರೂ ತೋಟದ ಮಾಲಕ ಪೂವಯ್ಯ ಅವರು ಮರ ತೆಗೆಸಲು ಮುಂದಾಗಿರಲಿಲ್ಲ ಎಂದು ಹೇಳಲಾಗಿದೆ
ರವಿವಾರದಂದು ಗ್ರಾಮದ ತೇಜಸ್ ಮತ್ತು ರಕ್ಷಿತಾ ಎಂಬುವವರ 1 ತಿಂಗಳು 10 ದಿನದ ಮಗುವಿಗೆ ಉಸಿರಾಟಕ್ಕೆ ತೊಂದರೆಯಾದ ಹಿನ್ನೆಲೆಯಲ್ಲಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಯಾರಿ ನಡೆಸಿದ್ದರು. ಆದರೆ ರಸ್ತೆ ಹದಗೆಟ್ಟಿರುವ ಹಿನ್ನೆಲೆ ಮತ್ತು ಮರವನ್ನು ತೆರವುಗೊಳಿಸದ ಕಾರಣ ಯಾವುದೇ ಬಾಡಿಗೆ ವಾಹನಗಳು ಬಂದಿರಲಿಲ್ಲ. ಈ ಸಂದರ್ಭ ಮಗುವಿನ ತಂದೆಯೇ ಕಾಲ್ನಡಿಗೆಯಲ್ಲಿ ಮಗುವನ್ನು ಕರೆದುಕೊಂಡು ಹೋಗುವ ಸಂದರ್ಭ ಮಗು ದಾರಿ ಮಧ್ಯೆ ಮೃತ ಪಟ್ಟಿದೆ ಎಂದು ತಿಳಿದು ಬಂದಿದೆ.
ತೋಟದ ಮಾಲಕ ಪೂವಯ್ಯ ಹಾಗು ದೂರು ನೀಡಿದರೂ ಕ್ರಮಕೈಗೊಳ್ಳದ ಬೇಳೂರು ಗ್ರಾಮ ಪಂಚಾಯತ್ ಪಿಡಿಒ ಸುರೇಶ್ ವಿರುದ್ಧ ಸೋಮವಾರಪೇಟೆ ಠಾಣೆಯಲ್ಲಿ ಮೃತ ಮಗುವಿನ ತಂದೆ ತೇಜಸ್ ದೂರು ನೀಡಿದ್ದಾರೆ.
ಗ್ರಾಮಸ್ಥರ ಆಕ್ರೋಶ: ಈ ಭಾಗದಲ್ಲಿರುವ ಸಂಪರ್ಕ ರಸ್ತೆ ಕಳೆದ ಇಪ್ಪತ್ತು ವರ್ಷಗಳಿಂದ ಅಭಿವೃದ್ದಿಯಾಗಿಲ್ಲ.ಗ್ರಾಮ ಪಂಚಾಯಿತಿಗೆ ಹಲವಾರು ಬಾರಿ ಮನವಿ ಕೊಟ್ಟಿದ್ದರೂ ರಸ್ತೆ ದುರಸ್ತಿಗೆ ಮುಂದಾಗಲಿಲ್ಲ. ಆರೋಗ್ಯ ಸಮಸ್ಯೆ ಎದುರಾದರೂ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ತೆರಳಲು ಸಾಧ್ಯವಾಗಿತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.