ಸುಳ್ಳು ಜಾತಿ ಪ್ರಮಾಣ ಪತ್ರ; ಗ್ರಾಪಂ ಅಧ್ಯಕ್ಷನಿಗೆ 10 ವರ್ಷ ಜೈಲು ಶಿಕ್ಷೆ
ಹಾಸನ, ಅ.27: ಉದ್ದೇಶಪೂರಕವಾಗಿ ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಗ್ರಾಮ ಪಂಚಾಯತ್ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಮತ್ತು ದಂಡವನ್ನು ಹಾಸನ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಧಿಸಿದೆ.
ಆರೋಪಿಯನ್ನು ತಿಪಟೂರು ತಾಲೂಕಿನ ಹೊನ್ನವಳ್ಳಿ ಗ್ರಾಮದ ಎಚ್.ಆರ್. ರಾಮಕೃಷ್ಣ ಶಿಕ್ಷೆಗೆ ಒಳಗಾಗಿರುವ ವ್ಯಕ್ತಿ ಎಂದು ತಿಳಿದುಬಂದಿದೆ. ಹಾಸನದ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ಸ್ವಾಮಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಆರೋಪಿಯು ಮೂಲತಃ ತಿಪಟೂರು, ತಾಲೂಕು ಹೊನ್ನವಳ್ಳಿ ಗ್ರಾಮದ ದೇಶ ಜಾತಿಗೆ ಸೇರಿದವರಾಗಿದ್ದು, ಹಾಲಿ ಅರಸೀಕೆರೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿರುವ ಡಿ.ಎಂ.ಕುರ್ಕಿ ಗ್ರಾಮದಲ್ಲಿ ವಾಸವಾಗಿದ್ದುಕೊಂಡು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪ.ಜಾತಿಗೆ ಮೀಸಲಾಗಿದ್ದ ಸ್ಥಾನಕ್ಕೆ ಸ್ಪರ್ಧಿಸಿ ನಂತರ ಅಧ್ಯಕ್ಷನಾಗಿ ಆಯ್ಕೆಯಾಗಿದ್ದ.
ಆರೋಪಿ ತನ್ನ ಇಬ್ಬರೂ ಮಕ್ಕಳಾದ ಡಿ.ಆರ್.ವಿನಯ್ ಮತ್ತು ಡಿ.ಆರ್ .ಪೂರ್ಣಿಮಾ ಅವರನ್ನು ಶಾಲೆಗೆ ದಾಖಲು ಮಾಡುವಾಗ ಜಾತಿ ಮೀಸಲಾತಿ ದುರ್ಬಳಕೆ ಮಾಡಿಕೊಂಡಿರುವುದು ತನಿಖೆಯಿಂದ ದೃಢಪಟ್ಟಿದೆ. ನ್ಯಾಯಾಲಯದ ತೀರ್ಪಿನಿಂದ ಮುಂದಿನ 10 ವರ್ಷಗಳ ಕಾಲ ಯಾವುದೇ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಆದೇಶಿಸಿದೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾಗಿ ಎಚ್.ಕೆ.ಸುರೇಶ್ ಅವರು ವಾದ ಮಂಡಿಸಿದರು.