ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಪೋಸ್ಟ್: ಸೈಬರ್ ಕ್ರೈಂ ಠಾಣೆಗೆ SFI ಜಿಲ್ಲಾಧ್ಯಕ್ಷ ಟಿ.ಎಸ್.ವಿಜಯ್ ಕುಮಾರ್ ದೂರು
Photo: @zoo_bear
ಮೈಸೂರು: ದೇಶದ ಸಂಸತ್ತಿನ ಒಳಗೆ ನುಗ್ಗಿ ಸ್ಮೋಕ್ ಬಾಂಬ್ ಸಿಡಿಸಿದ ಆರೋಪಿ ಮನೋರಂಜನ್ ಎಂದು ನನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಿ ತೇಜೋವಧೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತೀಯ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಮೈಸೂರು ಜಿಲ್ಲಾಧ್ಯಕ್ಷ ಟಿ.ಎಸ್. ವಿಜಯ್ಕುಮಾರ್ ಗುರುವಾರ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಕಚೇರಿಯಲ್ಲಿರುವ ಸೈಬರ್ ಕ್ರೈಂ ಅಧಿಕಾರಿಗೆ ಸಾಮಾಜಿಕ ಜಾಲತಾಣದಲ್ಲಿ ಎಸ್ಎಫ್ಐ ಸಂಘಟನೆ ಮತ್ತು ನನ್ನನ್ನು ತೇಜೋವಧೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ವಿಜಯ್ ಪಟೇಲ್ ʻಎಕ್ಸ್ʻ ಖಾತೆ, ಹುಣಸೂರು ಬಿಜೆಪಿ, ಪ್ರಶಾಂತ್ ಸಂಬರಗಿ, ಅಜಿತ್ ಎಸ್.ಶೆಟ್ಟಿ, ನಮೋ ಸರ್ಪೋಟರ್ಸ್, ಅಮಿತ್ ಶಾ ಫ್ಯಾನ್ ಪೇಸ್ ಬುಕ್ ಪೇಜ್ ನಲ್ಲೂ ಹರಿಬಿಟ್ಟಿದ್ದಾರೆ. ಸುದೀಪ್ ಶೆಟ್ಟಿ ನಿಟ್ಟೆ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಫೋಟೋ ಮನೋರಂಜನ್ಗೂ ನನಗೂ ಯಾವುದೇ ಸಂಬಂಧ ಇಲ್ಲ. ಸಂಸದ ಪ್ರತಾಪಸಿಂಹ ಹೆಸರು ಮರೆಮಾಚಲು ಎಸ್ಎಫ್ಐ ಸಂಘಟನೆ ಬಳಸಿಕೊಂಡು ಕೆಟ್ಟದಾಗಿ ಬಿಂಬಿಸಿದ್ದಾರೆ. ಪ್ರಕರಣದ ತನಿಖೆ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಫೇಸ್ಬುಕ್ ಪೇಜ್ನಲ್ಲಿ ಹಂಚಿಕೊಂಡ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಅದರ ಸ್ಕ್ರೀನ್ಶಾಟ್ ಅನ್ನು ಸಾಕ್ಷ್ಯವಾಗಿ ನೀಡಿ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ ಎಂದು ವಿಜಯ್ಕುಮಾರ್ ತಿಳಿಸಿದ್ದಾರೆ.
ಕಮ್ಯೂನಿಸ್ಟ್ ಸಂಘಟನೆ ಸದಸ್ಯರು ಬಿಜೆಪಿ ಸಂಸದ ಪ್ರತಾಪಸಿಂಹ ಅವರಿಂದ ಪಾಸ್ ಪಡೆದು ಸಂಸತ್ತಿಗೆ ಹೋಗುವ ಅಗತ್ಯವಿಲ್ಲ. ನಾವು ಬೀದಿಯಲ್ಲಿ ನಿಂತು ಹೋರಾಟ ಮಾಡುವವರು. ನಮ್ಮ ಸಂಘಟನೆಯನ್ನು ತೇಜೋವಧೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಪ್ರಾಂತ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ ಒತ್ತಾಯಿಸಿದರು.