ಪಂಚ ಗ್ಯಾರೆಂಟಿ, ಜನಸ್ನೇಹಿ ಯೋಜನೆಗಳಿಂದ ಕರ್ನಾಟಕದಲ್ಲಿ ಕುಸಿದ ರೈತರ ಆತ್ಮಹತ್ಯೆ: ವರದಿ
ಸಾಂದರ್ಭಿಕ ಚಿತ್ರ | PTI
ಬೆಂಗಳೂರು: ಪಂಚ ಗ್ಯಾರೆಂಟಿ ಯೋಜನೆಗಳು, ಸಾಲ ವಸೂಲಾತಿಯಲ್ಲಿ ವಿಳಂಬ, ಬೀಜ ಮತ್ತು ರಸಗೊಬ್ಬರಗಳಿಗೆ ಸಬ್ಸಿಡಿ ಬಿಡುಗಡೆ ಮತ್ತು ಸರಿಯಾಗಿ ಮಳೆಯಾಗಿರುವುದರಿಂದ ಕರ್ನಾಟಕದಲ್ಲಿ ರೈತರ ಆತ್ಮಹತ್ಯೆಗಳು ಕಡಿಮೆಯಾಗಿವೆ ಎಂದು Deccan Herald ವರದಿ ತಿಳಿಸಿದೆ.
2022-23ರ ಅವಧಿಯಲ್ಲಿ 922ಕ್ಕೆ ತಲುಪಿದ್ದ ರೈತರ ಆತ್ಮಹತ್ಯೆಗಳು, 2023-24ರಲ್ಲಿ1,061ಕ್ಕೆ ಏರಿಕೆಯಾಗಿತ್ತು. 2024-25ರಲ್ಲಿ ಈವರೆಗೆ 346 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಸಾಲ ವಸೂಲಾತಿಯಲ್ಲಿ ವಿಳಂಬ, ಬೀಜ ಮತ್ತು ರಸಗೊಬ್ಬರಗಳಿಗೆ ಸಬ್ಸಿಡಿ ಬಿಡುಗಡೆ ಮತ್ತು ಸರಿಯಾಗಿ ಮಳೆಯಾಗಿರುವುದರಿಂದ ಆತ್ಮಹತ್ಯೆ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ.
ಕಂದಾಯ ಇಲಾಖೆಯ ಮಾಹಿತಿಯ ಪ್ರಕಾರ, 2022ರಿಂದ ರಾಜ್ಯದಲ್ಲಿ ಪ್ರವಾಹ ಮತ್ತು ಅನಾವೃಷ್ಟಿಯಿಂದ ಬೆಳೆ ನಷ್ಟ ಸೇರಿದಂತೆ ವಿವಿಧ ರೀತಿಯ ಕೃಷಿ ಸಂಕಷ್ಟದಿಂದ 2,329 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಹಾವೇರಿಯಲ್ಲಿ 254, ಮೈಸೂರಿನಲ್ಲಿ 167, ಧಾರವಾಡದಲ್ಲಿ 148, ಕಲಬುರಗಿಯಲ್ಲಿ 142 ಮತ್ತು ಬೆಳಗಾವಿ ಜಿಲ್ಲೆಯಲ್ಲಿ 141 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 20 ಪ್ರಕರಣಗಳನ್ನು ಹೊರತುಪಡಿಸಿ 2,329 ಪ್ರಕರಣಗಳಲ್ಲಿ ರಾಜ್ಯ ಸರಕಾರವು ಪರಿಹಾರವನ್ನು ಕೂಡ ಬಿಡುಗಡೆ ಮಾಡಿದೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಈ ಕುರಿತು ಮಾತನಾಡಿದ್ದು, ರಾಜ್ಯ ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳು ಗ್ರಾಮೀಣ ಜನತೆಗೆ ಆರ್ಥಿಕ ಭದ್ರತೆಯನ್ನು ಒದಗಿಸಿದ್ದು, ಆತ್ಮಹತ್ಯೆ ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಾಹಿಸಿದೆ ಎಂದು ಹೇಳಿದ್ದಾರೆ.
ಗ್ಯಾರೆಂಟಿಗಳಲ್ಲದೆ ಸಹಕಾರಿ ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸಾಲ ಪಾವತಿ ಬಾಕಿ ಇರುವ ರೈತರ (ಸುಸ್ತಿದಾರ ಖಾತೆಯ) ಆಸ್ತಿ ಜಪ್ತಿ ಮಾಡದಂತೆ ಸೂಚಿಸಿರುವುದರಿಂದ ರೈತರಿಗೆ ಸ್ವಲ್ಪ ಮಟ್ಟಿಗೆ ರಿಲೀಫ್ ಸಿಕ್ಕಿದೆ.
ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ರಾಜ್ಯ ಸರ್ಕಾರ 5 ಲಕ್ಷ ರೂ. ಪರಿಹಾರ ನೀಡುತ್ತಿದ್ದು, ಮೃತರ ಪತ್ನಿಗೆ ಮಾಸಿಕ 2000 ರೂ.ಪಿಂಚಣಿ ನೀಡಲಾಗುತ್ತಿದೆ. ಹಾವು ಕಡಿತ ಹಾಗೂ ಇತರ ಅವಘಡಗಳಿಂದ ಮೃತಪಟ್ಟ ರೈತರಿಗೆ 2 ಲಕ್ಷ ರೂ.ಪರಿಹಾರ ನೀಡಲಾಗುತ್ತದೆ.
ಬೆಳಗಾವಿ, ಗದಗ, ವಿಜಯಪುರ ಮತ್ತು ಧಾರವಾಡದಲ್ಲಿ ಅತಿವೃಷ್ಟಿಯಿಂದ ಬೆಳೆಗಳು ಹಾನಿಗೀಡಾಗಿರುವುದರಿಂದ ಸುಸ್ತಿದಾರರ ಬಗ್ಗೆ ಸಹಾನುಭೂತಿ ತೋರುವಂತೆ ರಾಜ್ಯ ಮಟ್ಟದ ಬ್ಯಾಂಕ್ ಗಳಿಗೆ ಸರ್ಕಾರ ಸಲಹೆ ನೀಡಿತ್ತು. ಇದಲ್ಲದೆ ಸಹಕಾರ ಇಲಾಖೆ ಮತ್ತು ಇತರ ಇಲಾಖೆಗಳು, ಹೆಚ್ಚಿನ ಬಡ್ಡಿ ದರವನ್ನು ವಿಧಿಸುವ ಖಾಸಗಿ ಸಾಲಗಾರರು ಮತ್ತು ಹಣಕಾಸು ಸಂಸ್ಥೆಗಳ ಮೇಲೆ ಹೆಚ್ಚಿನ ನಿಗಾ ಇರಿಸಿದೆ ಎಂದು ಹೇಳಿದ್ದಾರೆ.
ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ್ ಮಾತನಾಡುತ್ತಾ, ತೆಂಗು, ಉದ್ದಿನಬೇಳೆ, ಕಾಳುಗಳು, ಸೂರ್ಯಕಾಂತಿ ಮತ್ತು ಮೆಕ್ಕೆಜೋಳ ಸೇರಿದಂತೆ ಹಲವಾರು ಬೆಳೆಗಳಿಗೆ ಬಡ್ಡಿ ರಹಿತ ಯೋಜನೆ (ಐಎಸ್ಎಸ್) ಮತ್ತು ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಸಕಾಲಿಕ ಬಿಡುಗಡೆಯಂತಹ ರಾಜ್ಯ ಸರ್ಕಾರದ ಕ್ರಮಗಳಿಂದ ಆತ್ಮಹತ್ಯೆಗಳನ್ನು ತಡೆಯುವಲ್ಲಿ ಸಹಾಯ ಮಾಡಿದೆ ಎಂದು ಹೇಳಿದ್ದಾರೆ.
ರೈತರಿಗೆ ಐದು ಲಕ್ಷದವರೆಗೆ ಶೂನ್ಯ ಬಡ್ಡಿದರದ ಸಾಲ, 3% ಬಡ್ಡಿದರದೊಂದಿಗೆ 15 ಲಕ್ಷದವರೆಗೆ ಸಾಲವನ್ನು ನೀಡುವುದರಿಂದ ರೈತರು ಖಾಸಗಿ ಸಾಲಗಾರರನ್ನು ಅವಲಂಬನೆಯನ್ನು ಕಡಿಮೆ ಮಾಡಿದೆ ಎಂದು ಹೇಳಿದ್ದಾರೆ.
ಧಾರಾಳ ಮಳೆಯಿಂದಾಗಿ ಜಲಾಶಯಗಳು ಭರ್ತಿಯಾಗಿ, ಬಿತ್ತನೆಗೆ ಸಹಕಾರಿಯಾಗಿದೆ. ಬೀಜ, ಕೃಷಿ ಉಪಕರಣ ಖರೀದಿ, ಟಾರ್ಪಾಲಿನ್ ಶೀಟ್, ಕ್ರಿಮಿನಾಶಕ ಪೂರೈಕೆಗೆ ಕನಿಷ್ಠ ಶೇ.50ರಷ್ಟು ಸಹಾಯಧನ, ಸಾವಯವ ಕೃಷಿಯನ್ನು ಉತ್ತೇಜಿಸಲು ಹಸಿರು ಎಲೆ ಗೊಬ್ಬರವನ್ನು ಪೂರೈಸಲು 75% ಸಹಾಯಧನವನ್ನು ನೀಡಲಾಗುತ್ತಿದೆ.