KRS ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಕಾವೇರಿ ನದಿಗೆ ಇಳಿದು ರೈತರ ಪ್ರತಿಭಟನೆ
ಶ್ರೀರಂಗಪಟ್ಟಣ, ಆ.23: ಕೆಆರ್ ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರೈತಸಂಘ ಹಾಗೂ ಭೂಮಿ ತಾಯಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಬುಧವಾರ ಪಟ್ಟಣದ ಕಾವೇರಿ ನದಿಯ ಸ್ನಾನಘಟ್ಟದ ಬಳಿ ನದಿಗೆ ಇಳಿದು ಪ್ರತಿಭಟಿಸಿದರು.
ಕೆ.ಎಸ್.ನಂಜುಂಡೇಗೌಡ, ಬಿ.ಸಿ.ಕೃಷ್ಣೇ ಗೌಡ, ಮೇಳಾಪುರ ಜಯರಾಮ, ಹನುಮಂತ ನಗರದ ಸ್ವಾಮಿ, ಹೊಸೂರಿನ ಶಿವರಾಜ್, ಹನಿಯಂಬಾಡಿ ನಾಗರಾಜ್, ಮಹದೇವ, ಹೊಸ ಉಂಡವಾಡಿ ಪುಟ್ಟೇಗೌಡ, ಪಾಲಹಳ್ಳಿ ರಾಮಚಂದ್ರ ಕೂಡ್ಲುಕುಪ್ಪೆ ಸ್ವಾಮಿಗೌಡ, ಇತರರು ನದಿಯಲ್ಲಿ ಪ್ರತಿಭಟನೆ ನಡೆಸಿ ಕೂಡಲೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಮುನ್ನ ರಾಜ್ಯ ಸರಕಾರ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸದೆ ಏಕಾಏಕಿ ನೀರು ಬಿಡುಗಡೆ ಮಾಡುವ ಮೂಲಕ ರೈತರ ಬದುಕನ್ನು ಆತಂಕಕ್ಕೆ ದೂಡಿದೆ ಎಂದು ಅವರು ಹೇಳಿದರು.
ರೈತರು ನ್ಯಾಯಾಲಯಕ್ಕೆ ಹೋಗಲಿ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಉಡಾಫೆ ಆಗಿ ಮಾತಾಡಿರುವುದು ಖಂಡನೀಯ. ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ರೈತರ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಕೇಂದ್ರ ಸರಕಾರವೂ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಅವರು ಆರೋಪಿಸಿದರು.
ಪೆÇಲೀಸರು ಮುನ್ನೆಚ್ಚರಿಕೆ ವಹಿಸಿ ಪ್ರತಿಭಟನಾ ನಿರತ ರೈತರು ನದಿಯಲ್ಲಿ ಜಾರದಂತೆ ಹಗ್ಗದ ಸಹಾಯದಿಂದ ಸುತ್ತುವರಿದು ರಕ್ಷಣೆ ನೀಡಿದರು.