‘ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ’ ವಿರೋಧಿಸಿ ಜ.29ರಂದು ರೈತರ ಪ್ರತಿಭಟನೆ

ಸಾಂದರ್ಭಿಕ ಚಿತ್ರ (credit: freepik.com)
ಬೆಂಗಳೂರು: ರೈತರಿಗೆ ನೀಡುವ ಸಾಲವನ್ನು ಕಡಿತ ಮಾಡಿರುವ ನಬಾರ್ಡ್ ನೀತಿ ವಿರೋಧಿಸಿ ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆ ಹಾವಳಿ ಕಿರುಕುಳ ತಡೆಗಟ್ಟಲು ಆಗ್ರಹಿಸಿ ಜ.29ರ ಬೆಳಗ್ಗೆ 11 ಗಂಟೆಗೆ ನಗರದ ನೃಪತುಂಗ ರಸ್ತೆಯಲ್ಲಿನ RBI ಮುಂಭಾಗದಲ್ಲಿ ರಾಜ್ಯ ರೈತ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಸೋಮವಾರ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಮೈಕ್ರೋ ಫೈನಾನ್ಸ್ ಹಾವಳಿ, ಕಿರುಕುಳದಿಂದ ಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ಇತರೆ ದುಡಿಯುವ ಜನ ಸಂಕಷ್ಟಕ್ಕೀಡಾಗಿದ್ದಾರೆ. ಮೈಕ್ರೋ ಫೈನಾನ್ಸ್ ಮೇಲೆ ಹಿಡಿತ ಇಲ್ಲದಂತಾಗಿ ಮಹಿಳೆಯರು ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗುತ್ತಿದ್ದು, ಕಿರುಕುಳ ತಾಳಲಾರದೇ ಊರುಗಳನ್ನು ತೊರೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸರಕಾರ 3 ವರ್ಷದಿಂದಲೂ ಕೃಷಿ ಕ್ಷೇತ್ರಕ್ಕೆ ನೀಡುವ ಸಾಲದ ಮೊತ್ತವನ್ನು ಕಡಿಮೆ ಮಾಡುತ್ತಲೇ ಬರುತ್ತಿದೆ. ಕೇಂದ್ರದ ನೀತಿಯಿಂದಾಗಿ ಈ ಸಾಲಿನಲ್ಲಿ ರಾಜ್ಯಕ್ಕೆ ನೀಡುತ್ತಿದ್ದ ಸಾಲವನ್ನು ಶೇ.58ರಷ್ಟು ತಗ್ಗಿಸಿದೆ. ಈ ಮೂಲಕ ಕೇಂದ್ರ ಸರಕಾರ ಇಡೀ ಕೃಷಿ ವ್ಯವಸ್ಥೆಯನ್ನೇ ನಾಶ ಮಾಡಿ ಕೃಷಿ ಕ್ಷೇತ್ರವನ್ನು ಸಂಪೂರ್ಣ ಕಾರ್ಪೋರೇಟ್ ಕಂಪೆನಿಗಳ ವಶಕ್ಕೆ ವಹಿಸಲು ಹುನ್ನಾರ ನಡೆಸಿದ್ದಾರೆ ಎಂದು ಬಡಗಲಪುರ ನಾಗೇಂದ್ರ ದೂರಿದರು.
ರೈತ ಮುಖಂಡ ವೀರಸಂಗಯ್ಯ ಮಾತನಾಡಿ, ನಬಾರ್ಡ್ ಕಳೆದ ವರ್ಷ ರಾಜ್ಯಕ್ಕೆ 5,600 ಕೋಟಿ ರೂ. ನೀಡಿತ್ತು. ಈ ವರ್ಷ ಕೇವಲ 2,340 ಕೋಟಿ ರೂ.ಗಳಷ್ಟು ಮಾತ್ರ ನೀಡಿದೆ. ಇದರಿಂದಾಗಿ 5ಲಕ್ಷ ರೂ. ವರೆಗೂ ಶೂನ್ಯ ಬಡ್ಡಿ ದರದಲ್ಲಿ ಸಹಕಾರಿ ಸಂಸ್ಥೆಗಳ ಮೂಲಕ ನೀಡುತ್ತಿದ್ದ ಅಲ್ಪಾವಧಿ ಸಾಲಕ್ಕೆ ಕುತ್ತು ಬಂದಿದೆ. ಮತ್ತು ರಿಯಾಯತಿ ದರದಲ್ಲಿ 15ಲಕ್ಷ ರೂ.ಗಳ ವರೆಗೆ ದೊರೆಯುತ್ತಿದ್ದ ಮಧ್ಯಮ ಅವಧಿ ಮತ್ತು ದೀರ್ಘಾವಧಿ ಕೃಷಿ ಸಾಲಕ್ಕೂ ಹೊಡೆತ ಬೀಳುತ್ತದೆ. ಶೂನ್ಯ ಬಡ್ಡಿ ದರದಲ್ಲಿ ಸುಮಾರು 30 ಲಕ್ಷ ರೈತರು ಪಡೆಯುತ್ತಿದ್ದ ಸಾಲ ನಿಂತು ಹೋಗುತ್ತದೆ ಎಂದು ವಿವರಿಸಿದರು.
ರೈತರು ಹೆಚ್ಚು ಬಡ್ಡಿ ತೆತ್ತು, ವಾಣಿಜ್ಯ ಬ್ಯಾಂಕುಗಳ ಮೊರೆ ಹೋಗಬೇಕು, ಇಲ್ಲವೇ ಖಾಸಗಿ ಸಾಲದ ಸುಳಿಗೆಗೆ ಸಿಕ್ಕಿ ಹಾಕಿಕೊಳ್ಳಬೇಕು. ಈ ಸುಳಿಗೆ ರೈತ ಸಮುದಾಯ ಬಲಿಯಾದಲ್ಲಿ ಸ್ಥಿರಾಸ್ತಿಗಳು ಹರಾಜಾಗುತ್ತವೆ. ಈಗಾಗಲೇ ಪ್ರತಿ 36 ನಿಮಿಷಕ್ಕೆ ಒಬ್ಬ ರೈತ ಆತ್ಮಹತ್ಯೆಗೆ ಒಳಗಾಗುತ್ತಿದ್ದು, ಇದೀಗ ಸರಣಿ ಆತ್ಮಹತ್ಯೆ ಹಾದಿ ತುಳಿಯಬೇಕಾಗುತ್ತದೆ. ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನು ಸಾಕಾಣಿಕೆ, ಇತರೆ ಕೃಷಿ ಪೂರ್ವಕ ಚಟುವಟಿಕೆಗೆ ನೀಡುತ್ತಿದ್ದ ಸಾಲದ ಸಹಾಯ ಧನ ಸಂಪೂರ್ಣ ಬಂದ್ ಆಗಲಿದೆ ಎಂದು ಅವರು ತಿಳಿಸಿದರು.
ನಬಾರ್ಡ್ ವತಿಯಿಂದ ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣ ಮಾಡುತ್ತಿದ್ದ ರಸ್ತೆ, ಇತರೆ ಕಾಮಗಾರಿಗಳಿಗೆ ಅವಕಾಶ ಇಲ್ಲದಂತಾಗುತ್ತದೆ. ನಮ್ಮ ರಾಜ್ಯದಲ್ಲಿರುವ ಹಲವಾರು ಡಿಸಿಸಿ ಬ್ಯಾಂಕುಗಳು, ಭೂ ಅಭಿವೃದ್ಧಿ ಬ್ಯಾಂಕುಗಳು, ಕೃಷಿ ಪತ್ತಿನ ಸಹಕಾರ ಸಂಘಗಳು, ಭವಿಷ್ಯದಲ್ಲಿ ಸಂಪೂರ್ಣವಾಗಿ ಮುಚ್ಚಬೇಕಾಗುತ್ತದೆ ಎಂದು ವೀರಸಂಗಯ್ಯ ಹೇಳಿದರು.