ಡಿ.23ರಂದು ಬೆಂಗಳೂರಿನಲ್ಲಿ ರೈತರ ರಾಷ್ಟ್ರೀಯ ಮಹಾಧಿವೇಶನ
ಬೆಂಗಳೂರು: ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನನ್ನು ಜಾರಿ ಮಾಡುವಂತೆ ಸರಕಾರವನ್ನು ಒತ್ತಾಯಿಸಲು ಡಿ.23ರಂದು ನಗರದಲ್ಲಿ ರೈತರ ರಾಷ್ಟ್ರೀಯ ಮಹಾಧಿವೇಶನ ಹಮ್ಮಿಕೊಳ್ಳಲಿದ್ದೇವೆ ಎಂದು ದಕ್ಷಿಣ ಭಾರತ ರಾಜ್ಯಗಳ ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿ ದಿಕ್ಕು ತಪ್ಪಿಸಬಾರದು. ರೈತರು ಸಾಲ ಮನ್ನಾ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ರೈತರ ಸಾಲ ಮನ್ನಾ ಆಗದಂತೆ ವಂಚಿಸಲು ಬ್ಯಾಂಕುಗಳು ಬಡ್ಡಿ ದುಪ್ಪಟ್ಟು ಆಗುತ್ತದೆ ಎಂದು ಹೆದರಿಸಿ ಖಾಲಿಪತ್ರಕ್ಕೆ ಸಹಿ ಪಡೆದು ಸಾಲ ನವೀಕರಣ ಮಾಡುತ್ತಿದ್ದಾರೆ. ಈ ಬಗ್ಗೆ ರೈತರು ಜಾಗೃತರಾಗಿರಬೇಕು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಸಮತ ದಳ ಮುಖಂಡ ವೆಂಕಟಸ್ವಾಮಿ, ಕರ್ನಾಟಕ ರಾಜ್ಯ ರೈತ ಸಂಘದ ನಾರಾಯಣ ರೆಡ್ಡಿ, ರಾಜ್ಯ ಕಬ್ಬು ಬೆಳೆಗಾರ ಸಂಘದ ಹತ್ತಳ್ಳಿ ದೇವರಾಜ್ ಸೇರಿದಂತೆ ಹಲವು ರೈತ ಮುಖಂಡರು ಹಾಜರಿದ್ದರು.