ಬರ ಪರಿಹಾರ ನೀಡದಿದ್ದರೆ ಜನತಾ ನ್ಯಾಯಾಲಯದಲ್ಲಿ ಹೋರಾಟ : ಸಚಿವ ಕೃಷ್ಣ ಭೈರೇಗೌಡ
ಬೆಂಗಳೂರು: ರಾಜ್ಯದಲ್ಲಿನ ಬರ ಪೀಡಿತ ಪ್ರದೇಶದಲ್ಲಿನ ಉಂಟಾಗಿರುವ ಬೆಳೆ ನಷ್ಟಕ್ಕೆ ಪರಿಹಾರ ಪಾವತಿಸಲು ಹಣ ಬಿಡುಗಡೆಗೆ ನಿರ್ದೇಶನ ನೀಡಬೇಕೆಂದು ಕೋರಿ ರಾಜ್ಯ ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಸೋಮವಾರ ನ್ಯಾಯಾಲಯದ ಪ್ರಕ್ರಿಯೆಗಳ ಬಳಿಕ ಸುದ್ದಿಗಾರರೊಂದಿಗೆ ಅವರು, ರಾಜ್ಯ ಸರಕಾರ ಒಂದೂವರೆ ತಿಂಗಳಿಗೂ ಮೊದಲೇ ಬೆಳೆ ನಷ್ಟ ಪರಿಹಾರದ ಅಂದಾಜು ಮಾಡಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅದು ಕೇಂದ್ರ ಗೃಹ ಸಚಿವರ ಕಚೇರಿಗೂ ಸಲ್ಲಿಕೆಯಾಗಿದೆ. ಆದರೆ ನಿಗದಿತ ಕಾಲಾವಧಿಯಲ್ಲಿ ರಾಜ್ಯಕ್ಕೆ ಪರಿಹಾರದ ಮೊತ್ತ ಬಿಡುಗಡೆಯಾಗಿಲ್ಲ ಎಂದು ಹೇಳಿದರು.
ಮಾರ್ಚ್ 23ರಂದು ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿ ಹಣ ಬಿಡುಗಡೆಗೆ ಸೂಚನೆ ನೀಡುವಂತೆ ಮನವಿ ಮಾಡಿತ್ತು. ಇಂದು ವಿಚಾರಣೆ ನಡೆದ ವೇಳೆ ಕೇಂದ್ರ ಸರಕಾರದ ಪರವಾಗಿ ಅಟಾರ್ನಿ ಜನರಲ್ ಅವರು ಎರಡು ವಾರಗಳಲ್ಲಿ ವಿಷಯವನ್ನು ಇತ್ಯರ್ಥಪಡಿಸಿ ಸುಪ್ರೀಂಕೋರ್ಟ್ ಮುಂದೆ ಬರುವುದಾಗಿ ತಿಳಿಸಿದ್ದಾರೆ.
ಹೀಗಾಗಿ ನ್ಯಾಯಾಲಯ ಕಾಲಾವಕಾಶ ನೀಡಿದೆ. ಕೇಂದ್ರದಿಂದ ಹಣ ಬಿಡುಗಡೆಯಾದರೆ ಪ್ರತಿಯೊಬ್ಬ ರೈತರ ಬೆಳೆ ನಷ್ಚಕ್ಕೆ ತಲಾ 13 ಸಾವಿರ ರೂ.ಪರಿಹಾರ ಪಾವತಿಸಬಹುದು. ರೈತರಿಗೆ ನ್ಯಾಯ ದೊರಕಿಸಲು ಕಾನೂನು ಮತ್ತು ಜನತಾ ನ್ಯಾಯಾಲಯದಲ್ಲಿ ಹೋರಾಟ ಮುಂದುವರೆಸಲಾಗುವುದು ಎಂದು ಕೃಷ್ಣ ಭೈರೇಗೌಡ ಎಚ್ಚರಿಕೆ ನೀಡಿದರು.