ವಕ್ಫ್ ಆಸ್ತಿಗಳ ಬಗ್ಗೆ ತಪ್ಪು ಮಾಹಿತಿ ನೀಡಿ ಕೋಮುದ್ವೇಷಕ್ಕೆ ಪ್ರಚೋದನೆ ಆರೋಪ : ಯತ್ನಾಳ್, ಸೂಲಿಬೆಲೆ ಸೇರಿ ಮೂವರ ವಿರುದ್ಧ ದೂರು ದಾಖಲು
![ವಕ್ಫ್ ಆಸ್ತಿಗಳ ಬಗ್ಗೆ ತಪ್ಪು ಮಾಹಿತಿ ನೀಡಿ ಕೋಮುದ್ವೇಷಕ್ಕೆ ಪ್ರಚೋದನೆ ಆರೋಪ : ಯತ್ನಾಳ್, ಸೂಲಿಬೆಲೆ ಸೇರಿ ಮೂವರ ವಿರುದ್ಧ ದೂರು ದಾಖಲು ವಕ್ಫ್ ಆಸ್ತಿಗಳ ಬಗ್ಗೆ ತಪ್ಪು ಮಾಹಿತಿ ನೀಡಿ ಕೋಮುದ್ವೇಷಕ್ಕೆ ಪ್ರಚೋದನೆ ಆರೋಪ : ಯತ್ನಾಳ್, ಸೂಲಿಬೆಲೆ ಸೇರಿ ಮೂವರ ವಿರುದ್ಧ ದೂರು ದಾಖಲು](https://www.varthabharati.in/h-upload/2024/10/29/1298346-untitled-2.webp)
ಬಸನಗೌಡ ಪಾಟೀಲ್ ಯತ್ನಾಳ್/ಚಕ್ರವರ್ತಿ ಸೂಲಿಬೆಲೆ
ಬೆಂಗಳೂರು: ವಕ್ಫ್ ಆಸ್ತಿಗಳ ಬಗ್ಗೆ ತಪ್ಪು ಮಾಹಿತಿ ಹರಡುವ ಮೂಲಕ ಇಸ್ಲಾಂ ಮತ್ತು ಮುಸ್ಲಿಮರ ಮಾನಹಾನಿ ಹಾಗೂ ಕೋಮುದ್ವೇಷಕ್ಕೆ ಪ್ರಚೋದನೆ ನೀಡುತ್ತಿರುವ ಆರೋಪದಡಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮತ್ತು ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹಿದಾಯತ್ ಉಲ್ಲಾಖಾನ್ ಅವರು ಶಿವಾಜಿನಗರದ ಉಪಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪರಿಷತ್ ಸದಸ್ಯ ಸಿ.ಟಿ.ರವಿ, ಮತ್ತು ಚಕ್ರವರ್ತಿ ಸೂಲಿಬೆಲೆ ಅವರು ಅಕ್ಟೋಬರ್ 15ರಂದು ವಿಜಯಪುರದಲ್ಲಿ ಅವಹೇಳನಕಾರಿ ಭಾಷೆ ಬಳಸಿ ಮಾತನಾಡಿದ್ದು, ವಕ್ಫ್ ಆಸ್ತಿಗಳ ಬಗ್ಗೆ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಅವರ ಭಾಷಣಗಳು ಇಸ್ಲಾಂ ಮತ್ತು ಅದರ ಅನುಯಾಯಿಗಳನ್ನು ನಿಂದಿಸುವಂತಿದ್ದು, ಭಯವನ್ನು ಹುಟ್ಟುಹಾಕುವಂತಿದೆ. ದ್ವೇಷವನ್ನು ಪ್ರಚೋದಿಸುವ ಮತ್ತು ಸಮಾಜದಲ್ಲಿ ಕೋಮು ಅಶಾಂತಿಯನ್ನು ಉಂಟು ಮಾಡುವ ಸಂಘಟಿತ ಪ್ರಯತ್ನವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸಾಮಾಜಿಕ ಸಾಮರಸ್ಯವನ್ನು ಹಾಳುಮಾಡಲು ಪ್ರಯತ್ನಿಸಿರುವ ಯತ್ನಾಳ್, ಸಿ.ಟಿ.ರವಿ ಮತ್ತು ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಜರುಗಿಸಬೇಕೆಂದು ಹಿದಾಯತ್ ಉಲ್ಲಾ ಖಾನ್ ತಮ್ಮ ದೂರಿನಲ್ಲಿ ಒತ್ತಾಯಿಸಿದ್ದಾರೆ.