ಸಿಎಂ ವಿರುದ್ಧ ಅವಹೇಳನಕಾರಿ ಹೇಳಿಕೆ ; ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಎಫ್‌ಐಆರ್ ದಾಖಲು
ಬೆಂಗಳೂರು : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಿಜಯಪುರ ಜಿಲ್ಲೆಯ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲು ಮಾಡಲಾಗಿದೆ.
ವಿಜಯಪುರ ನಗರದಲ್ಲಿ ವಕ್ಫ್ ಅದಾಲತ್ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದಲ್ಲದೆ, ಜಾತಿ ಜಾತಿ ನಡುವೆ ಗಲಭೆ ಸೃಷ್ಟಿಸಲು ಯತ್ನಿಸಿದ್ದಾರೆ ಎಂದು ಪರಶುರಾಮ ಹೊಸಮನಿ ಎಂಬವರು ದೂರು ಸಲ್ಲಿಸಿದ್ದಾರೆ.
ಅಲ್ಲದೇ, ಇಸ್ಲಾಮ್ ಧರ್ಮ, ಮುಸ್ಲಿಮ್ ಸಮಾಜಕ್ಕೂ ನಿಂದಿಸಿದ್ದಾರೆ. ವಿಜಯಪುರ ನಗರದ ಶಾಂತಿ, ಸೌಹಾರ್ದವನ್ನು ಕೆಡಿಸುವ ದುರುದ್ದೇಶದಿಂದ ಸಾರ್ವಜನಿಕವಾಗಿ ಇತರ ಧರ್ಮದವರನ್ನು ಹಿಯಾಳಿಸಿದ್ದಾರೆ. ಅಲ್ಲದೆ, ಮಹಿಳೆಯರ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಿ ಎಲ್ಲರಿಗೂ ಮಾನಸಿಕ ನೋವನ್ನುಂಟು ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಮಾಡಿರುವ ಭಾಷಣದಿಂದ ಹಾಗೂ ಅವರು ಕೊಟ್ಟಿರುವ ಕರೆಗಳಿಂದ ವಿಜಯಪುರ ಜಿಲ್ಲೆಯಲ್ಲಿ ಭಯದ ವಾತಾವರಣ ನಿರ್ಮಾಣ ಆಗಿದೆ ಮತ್ತು ಕೋಮು ಗಲಭೆ ಆಗುವ ಲಕ್ಷಣಗಳು ಕಂಡು ಬರುತ್ತಿವೆ. ಆದುದರಿಂದ, ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಆ ಪ್ರತಿಭಟನಾ ವೇದಿಕೆಯಲ್ಲಿದ್ದ ಇತರ ಆರೋಪಿಗಳ ಮೇಲೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪರಶುರಾಮ ಹೊಸಮನಿ ಮನವಿ ಮಾಡಿದ್ದಾರೆ.