ಬಿಬಿಎಂಪಿ ಕಚೇರಿಯಲ್ಲಿ ನಡೆದ ಬೆಂಕಿ ಅವಘಡ ಆಕಸ್ಮಿಕವಲ್ಲ: ಮುಖ್ಯಮಂತ್ರಿ ಚಂದ್ರು
ಬೆಂಗಳೂರು, ಆ.12: ಬಿಬಿಎಂಪಿ ಕಚೇರಿಯಲ್ಲಿ ನಡೆದ ಬೆಂಕಿ ಅವಘಡ ಆಕಸ್ಮಿಕವಲ್ಲ, ಅನುಮಾನಸ್ಪದವಾಗಿದೆ ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.
ಬೆಂಕಿ ಅನಾಹುತದಲ್ಲಿ ಗಾಯಗೊಂಡು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಬ್ಬಂದಿಯನ್ನು ಶನಿವಾರ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆಯೂ ಕೂಡ ಮೂರ್ನಾಲ್ಕು ಬಾರಿ ಬಿಬಿಎಂಪಿಯಲ್ಲಿ ಬೆಂಕಿ ಅವಘಡಗಳು ಸಂಭವಿಸಿವೆ. ಹಾಗಾಗಿ ಈ ಘಟನೆಗಳು ಆಕಸ್ಮಿಕ ಎಂಬುದಕ್ಕಿಂತ ಅನುಮಾನಸ್ಪದವಾಗಿವೆ. ಹಿಂದಿನದ್ದು ಸೇರಿ ಸಮಗ್ರ ತನಿಖೆಯಾಗಬೇಕು. ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಸ್ಥಳ ದರೋಡೆ ಮಾಡಿ, ಅಧಿಕಾರಿಗಳು, ಕಾರ್ಪೊರೇಟರ್ ಗಳು, ಶಾಸಕ, ಮಂತ್ರಿಗಳು ಶಾಮೀಲಾಗಿ, ಗುತ್ತಿಗೆ ವಿಚಾರದಲ್ಲಿ ಸಿಕ್ಕಾಪಟ್ಟೆ ಹಣಕಾಸಿನ ವ್ಯವಹಾರಗಳು ನಡೆದಿರುವಂತಹ ಸಂದರ್ಭದಲ್ಲಿ ಆ ಫೈಲ್ ಗಳನ್ನು ಮುಚ್ಚಿಹಾಕಬೇಕು, ಇಲ್ಲದಿದ್ದರೆ ಸಿಕ್ಕಿಹಾಕಿಕೊಳ್ಳುತ್ತೇವೆ, ಜೈಲಿಗೆ ಹೋಗುತ್ತೇವೆ ಎಂಬ ಭಯದಿಂದ ಇಂತಹ ಕೃತ್ಯ ನಡೆಸಿರುವ ಸಾಧ್ಯತೆ ಇರುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ಅನುಮಾನ ವ್ಯಕ್ತಪಡಿಸಿದರು.