ರೈತರಿಗೆ ಮೊದಲ ಹಂತದ ಬರ ಪರಿಹಾರ: ವಾರದೊಳಗೆ ವಿತರಣೆಗೆ ಕ್ರಮ ಕೈಗೊಳ್ಳಲು ಸಿಎಂ ಸಿದ್ದರಾಮಯ್ಯ ಸೂಚನೆ
ಬೆಳಗಾವಿ:ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಕಾರಣಕ್ಕೆ ಬೆಳೆ ನಾಶದಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಈಗಾಗಲೇ ಸರಕಾರ ಘೋಷಿಸಿರುವ ಎರಡು ಸಾವಿರ ರೂ. ವರೆಗಿನ ಮೊದಲ ಹಂತದ ಪರಿಹಾರವನ್ನು ಮುಂದಿನ ವಾರದೊಳಗೆ ವಿತರಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ಬುಧವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಸಿದ ಅವರು ಎಲ್ಲರ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಿ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.
ರಾಜ್ಯದಲ್ಲಿ ತಲೆದೋರಿರುವ ತೀವ್ರ ಬರಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತಷ್ಟು ಯುದ್ಧೋಪಾದಿಯಲ್ಲಿ ಕೆಲಸ ಮುಂದುವರೆಸಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲೆಗಳಿಗೆ ಭೇಟಿ ನೀಡಿರುವ, ಪರಿಶೀಲನೆ ನಡೆಸಿರುವ ಕುರಿತಾದ ಸಮಗ್ರ ಮಾಹಿತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಂಕಿ-ಅಂಶಗಳ ಸಹಿತ ಒದಗಿಸಬೇಕು ಎಂದು ಅವರು ಸೂಚನೆ ನೀಡಿದರು.
ರೈತರಿಗೆ ಮೊದಲ ಹಂತದಲ್ಲಿ 2 ಸಾವಿರ ರೂ. ವರೆಗೆ ಪರಿಹಾರ ಘೋಷಿಸಲಾಗಿದ್ದು, ಈ ಪರಿಹಾರವನ್ನು ತ್ವರಿತವಾಗಿ ವಿತರಿಸಲು ಮಾರ್ಗಸೂಚಿಗಳನ್ನು ರೂಪಿಸಿ, ಡಿ.ಬಿ.ಟಿ. ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.
ಸರಕಾರ ಸಮರ್ಪಕವಾಗಿ ನಡೆಯಲು ನಿಮ್ಮ ಪಾತ್ರ ಬಹುಮುಖ್ಯ. ನೀವು ಸರಕಾರದ ಕಣ್ಣು, ಕಿವಿ ಇದ್ದಹಾಗೆ ಎಂದು ತಿಳಿಸಿದ ಮುಖ್ಯಮಂತ್ರಿ, ರಾಜಕಾರಣಿಗಳು, ಅಧಿಕಾರಿಗಳು- ನಾವೆಲ್ಲರೂ ಜನರಿಗೋಸ್ಕರ ಇರುವುದು. ಜನರ ಕೆಲಸವನ್ನು ವೇಗವಾಗಿ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಗ್ಯಾರಂಟಿ ಯೋಜನೆಗಳಲ್ಲಿ ನೋಂದಾಯಿಸಿಕೊಂಡು ಇನ್ನೂ ಸೌಲಭ್ಯ ದೊರಕದ ಅರ್ಹ ಕೆಲವು ಫಲಾನುಭವಿಗಳಿಗೆ ಸೌಲಭ್ಯ ದೊರಕಲು ಇರುವ ತಾಂತ್ರಿಕ ಅಡಚಣೆಗಳನ್ನು ಶೀರ್ಘವೇ ನಿವಾರಿಸಬೇಕು.ಅಧಿವೇಶನ ನಡೆಯುವ ಸಂದರ್ಭದಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿದ್ದು, ಸಚಿವರಿಗೆ ಸೂಕ್ತ ಸಲಹೆ ನೀಡಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಗಳಾದ ಕೆ.ಗೋವಿಂದರಾಜು ಹಾಗೂ ನಸೀರ್ ಅಹ್ಮದ್, ಸರಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯೆಲ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಡಾ. ಶಾಲಿನಿ ರಜನೀಶ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.