“ಮೊದಲು ಕ್ಯಾಮರಾಗಳನ್ನು ಆಫ್ ಮಾಡಿ ನಂತರ ಹೇಳುತ್ತೇನೆ” ಎಂದ ಸಂಸದ ಪ್ರತಾಪ್ ಸಿಂಹ
ಸಂಸತ್ ಅತಿಕ್ರಮ ಪ್ರವೇಶದ ಪ್ರಶ್ನೆ ಕೇಳುತ್ತಿದ್ದಂತೆಯೇ ಪತ್ರಿಕಾಗೋಷ್ಠಿಯಿಂದ ನಿರ್ಗಮಿಸಿದ ಸಂಸದ
ಮೈಸೂರು: ಸಂಸತ್ ಅಧಿವೇಶನದ ವೇಳೆ ಅತಿಕ್ರಮ ಪ್ರವೇಶ ಮಾಡಿ ಹೊಗೆ ಬಾಂಬ್ ಸಿಡಿಸಿದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ಸಂಸದ ಪ್ರತಾಪ್ ಸಿಂಹ ನಿರಾಕರಿಸಿ ಕ್ಯಾಮರಾಗಳನ್ನು ಆಫ್ ಮಾಡಿ ನಂತರ ಹೇಳುತ್ತೇನೆ ಎಂದು ಉದ್ಧಟತನ ಪ್ರದರ್ಶಿಸಿದ ಘಟನೆ ನಡೆಯಿತು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸುವ ವೇಳೆ ಪತ್ರಕರ್ತರೊಬ್ಬರು ಸಂಸತ್ ಅತಿಕ್ರಮ ಪ್ರವೇಶದ ಕುರಿತ ಪ್ರಶ್ನೆ ಕೇಳುತ್ತಿದ್ದಂತೆಯೇ ನಿಮಗೆ ಮಾಡಲು ಕೆಲಸವಿಲ್ಲ. ಕ್ಯಾಮರಾಗಳನ್ನು ಆಫ್ ಮಾಡುವಂತೆ ಹೇಳಿದರು. ಕ್ಯಾಮರಾ ಆಫ್ ಮಾಡದಿದ್ದಾಗ ಸುದ್ದಿಗೋಷ್ಠಿಯಿಂದಲೇ ನಿರ್ಗಮಿಸಿದರು.
ಸಂಸತ್ ಪ್ರವೇಶಕ್ಕೆ ಗೊತ್ತಿರುವ ವ್ಯಕ್ತಿಯಾದ್ದರಿಂದ ಪಾಸ್ ಕೊಡಿಸಿದ್ದೆ.ಆತ ಹೊಗೆ ಬಾಂಬ್ ಸಿಡಿಸುತ್ತಾನೆ ಎಂದು ನನಗೆ ಗೊತ್ತಿತ್ತಾ ಎಂದು ಹೇಳಿಕೊಂಡು ಹೊರನಡೆದರು.
ಸಂಸದ ಪ್ರತಾಪ್ ಸಿಂಹ ಅವರ ಸುದ್ದಿಗೋಷ್ಠಿಯಲ್ಲಿ ಪಕ್ಕದಲ್ಲೇ ಕುಳಿತಿದ್ದ ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅವರು ಸಂಸದರ ನಡವಳಿಕೆ ಕಂಡು ಬೇಸರ ವ್ಯಕ್ತಪಡಿಸಿದರು.
ಈ ಸಂಬಂಧ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಖಂಡನೆ ವ್ಯಕ್ತಪಡಿಸಿದ್ದಾರೆ.