ಚಾರ್ಮಾಡಿ ಘಾಟಿಯಲ್ಲಿ ಮಂಜು ಕವಿದ ವಾತಾವರಣ: ಎರಡು ಕಡೆ ಅಪಘಾತ
ಮೂಡಿಗೆರೆ, ಸೆ.8: ಚಾರ್ಮಾಡಿ ಘಾಟಿಯಲ್ಲಿ ಮಳೆ ಸುರಿಯುತ್ತಿದ್ದು ದಟ್ಟನೆಯ ಮಂಜು ಕವಿದ ಕಾರಣದಿಂದಾಗಿ ಶುಕ್ರವಾರ ಸಂಜೆ ಎರಡು ಪ್ರತ್ಯೇಕ ಅಪಘಾತಗಳು ಸಂಭವಿಸಿವೆ.
ಚಾರ್ಮಾಡಿ ಬಿದಿರುತಳ ಬಸ್ ನಿಲ್ದಾಣದ ಅಂತರದಲ್ಲಿ ಮಂಗಳೂರಿಗೆ ಸಾಗುತ್ತಿದ್ದ ಬೊಲೆರೋ ವಾಹನವೊಂದು ಮಂಜು ಕವಿದ ಕಾರಣ ದಾರಿ ಕಾಣದೇ ತಡೆಗೋಡೆಗೆ ಹತ್ತಿ ಪಲ್ಟಿಯಾಗಿದ್ದು ಅದೃಷ್ಟವಶಾತ್ ಬೊಲೆರೋ ವಾಹನದಲ್ಲಿ ಇದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೊಂದು ಅಪಘಾತ ಅಣ್ಣಪ್ಪ ಸ್ವಾಮಿ ದೇವಸ್ಥಾನದಿಂದ ಸ್ವಲ್ಪ ಮುಂದೆ ಕಿರಿ ದಾದ ದಾರಿಯಲ್ಲಿ ಸಂಭವಿಸಿದೆ. ಮಂಜು ಮುಸುಕಿದ್ದರಿಂದ ದಾರಿ ಕಾಣದೇ ಹುಬ್ಬಳ್ಳಿಯಿಂದ ಧರ್ಮಸ್ಥಳಕ್ಕೆ ಸಾಗುತ್ತಿದ್ದ ಬಸ್, ಆ ಕಡೆಯಿಂದ ಧರ್ಮಸ್ಥಳದಿಂದ ಧಾರವಾಡಕ್ಕೆ ಸಾಗುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿ ತಡೆಗೋಡೆ ಕುಸಿದಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗಿದೆ.
ದಟ್ಟ ಮಂಜು ಕವಿದ ವಾತಾವರಣವಿದ್ದು ಈ ಹಿನ್ನಲೆಯಲ್ಲಿ ಘಾಟಿಯಲ್ಲಿ ಇನ್ನಷ್ಟು ಅಪಾಯವಾಗುವ ಸಾಧ್ಯತೆಯಿದ್ದು ಪ್ರಯಾಣಿಕರು ಎಚ್ಚರಿಕೆಯಿಂದ ಸಂಚರಿಸಬೇಕಾಗಿದೆ.