ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಂತೆ ನಡೆಯುತ್ತೇವೆ: ಡಿಕೆ ಶಿವಕುಮಾರ್

ಡಿ. ಕೆ. ಶಿವಕುಮಾರ್
ಬೆಳಗಾವಿ/ ಹುಬ್ಬಳ್ಳಿ: "ನನ್ನನ್ನೂ ಸೇರಿದಂತೆ ಎಲ್ಲರೂ ಬಾಯಿಗೆ ಬೀಗ ಹಾಕಿಕೊಳ್ಳಬೇಕು ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದು, ಅವರ ಮಾರ್ಗದರ್ಶನದಲ್ಲಿ ನಡೆಯುತ್ತೇವೆ" ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣ ಹಾಗೂ ಬೆಳಗಾವಿಯ ಸರ್ಕಿಟ್ ಹೌಸ್ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಹುದ್ದೆ ಬದಲಾವಣೆ ಬಗ್ಗೆ ಕೇಳಿದಾಗ, "ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ರಾಷ್ಟೀಯ ನಾಯಕರು. ಅವರ ಹಾಗೂ ಪಕ್ಷದ ವರಿಷ್ಟರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಕಾರ್ಯಕರ್ತರಾಗಿ ದುಡಿಯುತ್ತೇವೆ" ಎಂದು ಸ್ಪಷ್ಟಪಡಿಸಿದರು.
ಸಚಿವ ಆರ್. ಬಿ. ತಿಮ್ಮಾಪುರ ಅವರ ದಲಿತ ಸಿಎಂ ಹೇಳಿಕೆ ಹಾಗೂ ಸಿದ್ದರಾಮಯ್ಯ ಅವರೇ ನಮ್ಮ ನಾಯಕರು ಎನ್ನುವ ಹೇಳಿಕೆ ಬಗ್ಗೆ ಕೇಳಿದಾಗ, "ಏನೇನೋ ಹೇಳುವ ನಿಮ್ಮ (ಮಾಧ್ಯಮ) ಮಾತುಗಳಿಗೆ ನಾನು ಉತ್ತರ ನೀಡಲು ಸಿದ್ಧನಿಲ್ಲ" ಎಂದರು.
ಬೆಳಗಾವಿಯಿಂದಲೇ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎನ್ನುವ ಬಿಜೆಪಿಯವರ ಟೀಕೆಯ ಬಗ್ಗೆ ಕೇಳಿದಾಗ, "ಇದೇ ಬೆಳಗಾವಿ ನೆಲದಲ್ಲಿನ ಗಾಂಧಿ ಬಾವಿಯಿಂದ ನೀರನ್ನು ತೆಗೆದು ನೆಲವನ್ನು ಸ್ವಚ್ಛ ಮಾಡಿ. ಬಿಜೆಪಿ ಮಾಡಿದ್ದ ಕೊಳೆ, ಕಸವನ್ನು ಗುಡಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು" ಎಂದು ತಿರುಗೇಟು ನೀಡಿದರು
ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದ ತಯಾರಿ ಕುರಿತು ಹುಬ್ಬಳ್ಳಿ, ಧಾರವಾಡ, ಹಾವೇರಿ ಸೇರಿದಂತೆ ಈ ಭಾಗದ ಮುಖಂಡರ ಪೂರ್ವಭಾವಿ ಸಭೆ ಕರೆಯಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಇಡೀ ಕಾರ್ಯಕ್ರಮದ ತಯಾರಿಯನ್ನು ಬೆಳಗಾವಿಯಲ್ಲಿ ಪರಿಶೀಲನೆ ಮಾಡಿದ್ದಾರೆ. ಶನಿವಾರ (ನಾಳೆ) ಧಾರವಾಡದಲ್ಲಿ ಸಮಾವೇಶದ ತಯಾರಿ ಕುರಿತು ಮತ್ತೊಂದು ಸುತ್ತಿನ ಸಭೆಯಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹಠಾತ್ ನಿಧನದಿಂದ ಬಹಳ ವಿಜೃಂಭಣೆಯಿಂದ ಆಯೋಜನೆಗೊಂಡಿದ್ದ ಸಮಾವೇಶ ಮುಂದೂಡಲಾಯಿತು. ಇದೇ 26- 27 ರಂದು ಎಐಸಿಸಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜನಿಸಿದ ಮಧ್ಯಪ್ರದೇಶದ ಮಾಹೋದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಇದು ಕೆಪಿಸಿಸಿಯ ಕಾರ್ಯಕ್ರಮವಲ್ಲ, ಎಐಸಿಸಿಯಿಂದ ನಡೆಯುವ ಕಾರ್ಯಕ್ರಮ. ಜ.21 ರ ಬೆಳಿಗ್ಗೆ ಸುವರ್ಣ ಸೌಧದ ಮುಂಭಾಗದಲ್ಲಿ ಮಹಾತ್ಮಾ ಗಾಂಧಿ ಅವರ ಪ್ರತಿಮೆಯನ್ನು ಮಲ್ಲಿಕಾರ್ಜುನ ಖರ್ಗೆ ಅವರು ಅನಾವರಣ ಮಾಡಲಿದ್ದಾರೆ. ರಾಹುಲ್ ಗಾಂಧಿ ಅವರ ಉಪಸ್ಥಿತಿ ಇರಲಿದೆ. ಜೊತೆಗೆ ಎಲ್ಲಾ ಜನಪ್ರತಿನಿಧಿಗಳು, ಪ್ರತಿಪಕ್ಷಗಳ ನಾಯಕರು, ಎರಡೂ ಮನೆಗಳ ಸ್ಪೀಕರ್ ಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಳೆದ ಬಾರಿಯ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರಲಿಲ್ಲ ಎನ್ನುವ ಸಂಸದ ಜಗದೀಶ್ ಶೆಟ್ಟರ್ ಅವರ ಆರೋಪದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಉದ್ಘಾಟನಾ ಫಲಕದಲ್ಲಿಯೇ ಶೆಟ್ಟರ್ ಅವರ ಹೆಸರಿದೆ. ಆಹ್ವಾನ ಪತ್ರಿಕೆಯನ್ನು ನಾನೇ ಕೊಡುತ್ತೇನೆ. ಹೀಗಿದ್ದರೂ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಲಾಗುತ್ತಿದೆ. ಎಲ್ಲಾ ಪಕ್ಷದವರಿಗೂ ಆಹ್ವಾನ ನೀಡಲಾಗುವುದು ಎಂದು ನಾನೇ ಖುದ್ದಾಗಿ ಹೇಳುತ್ತಿದ್ದೇನೆ. ಸರ್ಕಾರಿ ಕಾರ್ಯಕ್ರಮಕ್ಕೆ ಎಲ್ಲರೂ ಬರಬಹುದು" ಎಂದು ತಿಳಿಸಿದರು.