ಲೋಕಸಭಾ ಚುನಾವಣೆಗೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಡಾ.ಸಿ.ಎಸ್.ದ್ವಾರಕಾನಾಥ್ ಅವರಿಗೆ ಟಿಕೆಟ್ ನೀಡಲು ಒತ್ತಾಯ
ಬೆಂಗಳೂರು, ಆ.20: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್. ದ್ವಾರಕಾನಾಥ್‍ರಿಗೆ ಟಿಕೇಟ್ ನೀಡಬೇಕು ಎಂದು ಕರ್ನಾಟಕ ಮುಸ್ಲಿಮ್ ಯುನಿಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಖಾಸಿಂ ಸಾಬ್ ಒತ್ತಾಯಿಸಿದ್ದಾರೆ.
ರವಿವಾರ ಈ ಕುರಿತು ಪ್ರಕಟನೆ ಹೊರಡಿಸಿರುವ ಅವರು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳಲ್ಲಿ ಅಹಿಂದ ವರ್ಗಗಳ ಮಾತದಾರರು ಹೆಚ್ಚಿದ್ದು, ವಿಶೇಷವಾಗಿ ಅಲ್ಪಸಂಖ್ಯಾತ ಮುಸ್ಲಿಮ್ ಮಾತದಾರರು ಸುಮಾರು ಒಂದು ಲಕ್ಷ ಅರವತ್ತು ಸಾವಿರದಷ್ಟು ಇದ್ದಾರೆ. ಈ ಕ್ಷೇತ್ರದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಹಿಂದವರ್ಗಗಳ ನೈಜ ಪ್ರತಿನಿದಿಗೆ ಟಿಕೆಟ್ ನೀಡಬೇಕು ಎಂದಿದ್ದಾರೆ.
ದ್ವಾರಕಾನಾಥ್ ಅವರು ಮಹಿಳೆಯರ, ಯುವ, ರೈತ, ದಲಿತ, ಹಿಂದುಳಿದ ಅಲ್ಪಸಂಖ್ಯಾತರ ಸಾಮಾಜಿಕ ನ್ಯಾಯದ ಧ್ವನಿಯಾಗಿದ್ದು ಇಂತಹ ಸಮ-ಸಮಾಜದ ಕನಸುಳ್ಳ ವ್ಯಕ್ತಿ ನಮ್ಮ ಜಿಲ್ಲೆಯ ಪ್ರಧಿನಿದಿಯಾಗಿ ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸಬೇಕಿದೆ. ಕೆಪಿಸಿಸಿ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾಗಿ ಸಕ್ರಿಯವಾಗಿರುವ ದ್ವಾರಕಾನಾಥ್ ಕರ್ನಾಟಕದ ಅಹಿಂದ ಸಮುದಾಯಗಳ ಅಸ್ಮಿತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇವರ 25 ವರ್ಷಗಳ ಹಿಂದೆಯೆ ಯೋಜಿಸಲಾಗಿದ್ದ ‘ಜಲವಾಹಿನಿ' ಎಂಬ ನೀರಿನ ಹೋರಾಟವನ್ನು ಇಂದಿಗೂ ಚಿಕ್ಕಬಳ್ಳಾಪುರ-ಕೋಲಾರ ಅವಳಿ ಜಿಲ್ಲೆಗಳ ಫಲಾನುಭವಿ ರೈತರು ಮರೆತಿಲ್ಲ. ಇಂತಹ ಧೀಮಂತ ಜನಪರ ಪ್ರತಿನಿದಿ, ನೈಜ ಅಂಬೇಡ್ಕರ್ ಅನುಯಾಯಿ, ಸಾಮಾಜಿಕ ನ್ಯಾಯದ ಕನಸುಳ್ಳ ಡಾ. ದ್ವಾರಕಾನಾಥ್ ರವರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಟಿಕೆಟ್ ನೀಡಿ ಕಣಕ್ಕೆ ಇಳಿಸುವ ಮೂಲಕ ಅಹಿಂದ ವರ್ಗಗಳಿಗೆ ರಾಜಕೀಯ ನ್ಯಾಯ ನೀಡಬೇಕೆಂದು ಖಾಸಿಂ ಸಾಬ್ ಕಾಂಗ್ರೆಸ್ ಪಕ್ಷಕ್ಕೆ ಒತ್ತಾಯಿಸಿದ್ದಾರೆ.