ರಾಜ್ಯದಲ್ಲಿ ಆಪರೇಷನ್ ಹಸ್ತದ ಮುನ್ಸೂಚನೆ; ಲೋಕಸಭೆ ಚುನಾವಣೆ ಹೊತ್ತಿಗೆ ಏಳೆಂಟು ಮಂದಿ ಶಾಸಕರು ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ
ಬೆಂಗಳೂರು, ಆ. 16: ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಬಿಜೆಪಿಯಲ್ಲಿನ ಅತೃಪ್ತ ಶಾಸಕರನ್ನು ಸೆಳೆಯಲು ಕಾಂಗ್ರೆಸ್ ತೆರೆಮರೆಯಲ್ಲೇ ಕಸರತ್ತು ನಡೆಸಿದ್ದು, ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
‘ಪಕ್ಷ ಸಧೃಡಗೊಳಿಸಲು ದ್ವೇಷ ಬಿಟ್ಟು ಬೇರೆ ಪಕ್ಷಗಳ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಸೂಚನೆಯನ್ನು ನೀಡಿದ್ದೇವೆ. ಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂಬ ತೀರ್ಮಾನವನ್ನು ಸ್ಥಳೀಯ ಮುಖಂಡರ ನಿರ್ಧಾರಕ್ಕೆ ಬಿಡಲಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸುವ ಮೂಲಕ ಪರೋಕ್ಷವಾಗಿ ಆಪರೇಷನ್ ಹಸ್ತದ ಮುನ್ಸೂಚನೆ ನೀಡಿದ್ದಾರೆ.
‘ದೊಡ್ಡವರನ್ನು ಬಿಟ್ಟು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಲೋಕಸಭೆ ಚುನಾವಣೆಗೆ ಪಕ್ಷದ ಬಲ ಹೆಚ್ಚಿಸಿಕೊಳ್ಳಬೇಕೆಂಬ ಸೂಚನೆಯನ್ನು ನೀಡಿದ್ದೇವೆ. ಚುನಾವಣೆಯಲ್ಲಿ ಪಕ್ಷದ ಮತ ಬ್ಯಾಂಕ್ ಅನ್ನು ಹೆಚ್ಚಿಸುವುದಷ್ಟೇ ನಮ್ಮ ಆದ್ಯತೆ. ಎಲ್ಲ ದ್ವೇಷ ಮರೆತು ಅನ್ಯ ಪಕ್ಷದವರನ್ನು ಸೇರ್ಪಡೆ ಮಾಡಿಕೊಳ್ಳುತ್ತೇವೆ’ ಎಂದು ಶಿವಕುಮಾರ್ ತಿಳಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಮರಳಿ ಮನೆ: ಕಾಂಗ್ರೆಸ್-ಜೆಡಿಎಸ್ ಸರಕಾರ ಪತನಕ್ಕೆ ಕಾರಣರಾಗಿ ಬಿಜೆಪಿ ಸೇರಿರುವ ಕೆಲ ಶಾಸಕರು, ಇದೀಗ ಮತ್ತೆ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಸಿದ್ಧರಾಗಿದ್ದಾರೆ. ಈ ಸಂಬಂಧ ಸಮಾಲೋಚನೆ ನಡೆಯುತ್ತಿವೆ. ಲೋಕಸಭಾ ಚುನಾವಣೆಯ ಹೊತ್ತಿಗೆ ಬೆಂಗಳೂರಿನ ನಾಲ್ಕೈದು ಮಂದಿ ಬಿಜೆಪಿ ಶಾಸಕರೂ ಸೇರಿದಂತೆ ಏಳೆಂಟು ಮಂದಿ ಶಾಸಕರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ನಾನಂತೂ ಬಿಜೆಪಿ ಬಿಡುವುದಿಲ್ಲ: ಈ ಮಧ್ಯೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಮಾಜಿ ಸಚಿವ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿಯ ಹಾಲಿ ಶಾಸಕ ಮುನಿರತ್ನ, ‘ಬೇಕಾದರೆ ರಾಜಕೀಯ ನಿವೃತ್ತಿ ಆಗುತ್ತೇನೆಯೆ ಹೊರತು ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಅವಶ್ಯಕತೆ ನನಗೆ ಇಲ್ಲ. ಯಾವುದೇ ಕಾರಣಕ್ಕೂ ನಾನಂತೂ ಬಿಜೆಪಿ ಬಿಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
‘17 ಜನರ ಪೈಕಿ ಯಾರು ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಾರೋ ಗೊತ್ತಿಲ್ಲ, ನಾನಂತೂ ಬಿಜೆಪಿ ಬಿಟ್ಟು ಹೋಗುವುದಿಲ್ಲ. ಕ್ಷೇತ್ರದ ಅಭಿವೃದ್ಧಿ ವಿಚಾರದ ಬಗ್ಗೆ ಚರ್ಚಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿರುತ್ತೇವೆ ಹೊರತು, ಅವರ ಜೊತೆ ಯಾವುದೇ ರಾಜಕೀಯ ಸಂಬಂಧ ಉಳಿಸಿಕೊಂಡಿಲ್ಲ’ ಎಂದು ಅವರು ಹೇಳಿದರು.
ವೈಯಕ್ತಿಕ ದ್ವೇಷವಿಲ್ಲ: ‘ಪಕ್ಷ ಬಿಟ್ಟು ಬಂದರೂ, ವೈಯಕ್ತಿಕವಾಗಿ ಡಿ.ಕೆ.ಸುರೇಶ್, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರ ಜೊತೆ ಯಾವುದೇ ದ್ವೇಷ ಇಲ್ಲ. ಆದರೆ, ಅಧಿಕಾರಕ್ಕಾಗಿ ನಾನು ಪಕ್ಷ ಬಿಟ್ಟು ಹೋಗುವುದಿಲ್ಲ. ಮುಂದಿನ 5 ವರ್ಷ ನಾನು ವಿಪಕ್ಷದಲ್ಲಿಯೇ ಇರುತ್ತೇನೆ’ ಎಂದು ಅವರು ತಿಳಿಸಿದರು.
‘ನಾನೂ, ಡಿ.ಕೆ.ಶಿವಕುಮಾರ್ ಅವರು 40 ವರ್ಷಗಳ ಸ್ನೇಹಿತರು. ನನ್ನ ಜೀವನದ ಗುರು ಹಾಗೂ ರಾಜಕೀಯ ಗುರು ಬಿ.ಕೆ.ಹರಿಪ್ರಸಾದ್. ಅದು ರಾಜಕೀಯ ಕಾರಣ ಅಲ್ಲ, ಅದು ನಮ್ಮ ಊರಿನ ಸಂಬಂಧ. ನನ್ನ ಮುಂದಿನ ಜೀವನದ ಆಧಾರ ಬಿಜೆಪಿ ಚಿಹ್ನೆ, ಬಿಜೆಪಿ ಬಗ್ಗೆ ನಂಬಿಕೆ, ಗೌರವ ಇದೆ ಎಂದು ಮುನಿರತ್ನ ತಿಳಿಸಿದರು.
ಬೆದರಿಸುವ ಅವಶ್ಯಕತೆ ಇಲ್ಲ: ‘ಕ್ಷೇತ್ರದ ಅಭಿವೃದ್ಧಿ ಮಾಡಿಕೊಟ್ಟರೆ ಶಾಸಕ ಸ್ಥಾನವನ್ನೆ ಬಿಟ್ಟುಕೊಡುತ್ತೇನೆ. ಯಾರಾದರೂ ಬಿಜೆಪಿ ತೊರೆದರೆ ಅವರನ್ನು ಮನವೊಲಿಸುವ ಕೆಲಸ ಮಾಡಲ್ಲ. ಅದು ನನಗೆ ಅವಶ್ಯಕತೆ ಇಲ್ಲ. ಬಿಟ್ಟು ಹೋಗಿ ಅವರಿಗೆ ಒಳ್ಳೆಯದಾಗುತ್ತದೆ ಅಂದರೆ ನಾನೇಕೆ ತಡೆಯಲಿ’ ಎಂದು ಅವರು ತಿಳಿಸಿದರು.