ಚಾಮರಾಜನಗರ: ಕಾಡಾನೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಇಬ್ಬರು ಪ್ರವಾಸಿಗರಿಗೆ 20 ಸಾವಿರ ರೂ. ದಂಡ
ಚಾಮರಾಜನಗರ : ಕಾಡಾನೆ ಜೊತೆ ಸೆಲ್ಪಿ ಕ್ಲಿಕ್ಕಿಸಿಕೊಂಡ ಇಬ್ಬರು ಪ್ರವಾಸಿಗರಿಗೆ ಅರಣ್ಯ ಇಲಾಖೆ 20 ಸಾವಿರ ದಂಡ ವಿಧಿಸಿದೆ. ತೆಲಂಗಾಣ ನಿಜಾಂಪೇಟೆ ನಿವಾಸಿಗಳಾದ ದಿಲೀಪ್ ಕುಮಾರ್ (42) ಹಾಗೂ ಶ್ಯಾಂಪ್ರಸಾದ್(31) ಎಂಬವರಿಗೆ ದಂಡ ವಿಧಿಸಿದೆ.
ಬುಧವಾರ ಸಂಜೆ ಈ ಇಬ್ಬರು ತಮ್ಮ ಕಾರಿನಲ್ಲಿ ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಮೂಲಕ ಕೊಯಮತ್ತೂರಿಗೆ ತೆರಳುತ್ತಿದ್ದರು. ಈ ವೇಳೆ ಆಸನೂರು ಬಳಿ ರಸ್ತೆ ಬದಿಯಲ್ಲಿ ಕಾಡಾನೆ ನಿಂತಿದ್ದನ್ನು ಕಂಡಿದ್ದಾರೆ. ಈ ವೇಳೆ ಕಾರಿನಿಂದ ಇಳಿದ ಇವರು ಕಾಡಾನೆಯ ತೀರಾ ಸಮೀಪ ಹೋಗಿ ಸೆಲ್ಪಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದನ್ನು ಗಸ್ತು ತಿರುಗುತ್ತಿದ್ದ ತಮಿಳುನಾಡಿನ ಅರಣ್ಯ ಇಲಾಖೆ ಸಿಬ್ಬಂದಿ ಕಂಡಿದ್ದಾರೆ. ಇನ್ನೇನೂ ವಿಚಾರಿಸಬೇಕು ಎನ್ನುವಷ್ಟರಲ್ಲಿ ಇಬ್ಬರು ಕಾರು ಹತ್ತಿ ಪರಾರಿಯಾಗಿದ್ದರು. ಬಳಿಕ, ಈ ಬಗ್ಗೆ ಬಣ್ಣಾರಿ ಚೆಕ್ ಪೋಸ್ಟ್ ಗೆ ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ರವಾನಿಸಿದ್ದಾರೆ. ಅಲ್ಲಿ ಇವರ ಕಾರನ್ನು ಅಡ್ಡ ಹಾಕಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬೇಜವಾಬ್ದಾರಿ ತೋರಿದ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಇಬ್ಬರಿಗೂ ತಲಾ 10 ಸಾವಿರ ರೂ. ದಂಡ ವಿಧಿಸಿ, ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸನೂರು ವಲಯ ಅರಣ್ಯಾಧಿಕಾರಿ ಪಾಂಡಿರಾಜನ್,' 'ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಾಗ್ಗೆ ಕಾಡಾನೆ ಕಾಣಿಸಿಕೊಳ್ಳುತ್ತದೆ. ವಾಹನ ಸವಾರರು ಆದಷ್ಟು ಜಾಗರೂಕರಾಗಿ ವಾಹನ ಚಾಲನೆ ಮಾಡಬೇಕು. ಕೆಲವರು ಕೀಟಲೆ ಮಾಡಿ, ಫೋಟೋ ವಿಡಿಯೋ ತೆಗೆದುಕೊಳ್ಳಲು ಹೋಗಿ ಪ್ರಾಣಕ್ಕೇ ಕುತ್ತು ತಂದುಕೊಳ್ಳುತ್ತಿದ್ದಾರೆ. ಈ ರೀತಿ ಕಾಡಾನೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋದ ತೆಲಂಗಾಣದ ಇಬ್ಬರಿಗೆ ದಂಡ ವಿಧಿಸಲಾಗಿದೆ' ಎಂದು ಮಾಹಿತಿ ನೀಡಿದ್ದಾರೆ.