ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚಿಸಿ: ಸಿಎಂ, ಸಚಿವರಿಗೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಪತ್ರ
ಹುಬ್ಬಳ್ಳಿ: ಧಾರವಾಡ ಪ್ರತ್ಯೇಕ ಪಾಲಿಕೆಯ ಹೋರಾಟ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಭಾಗದ ಶಾಸಕ ಮತ್ತೆ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಪ್ರತ್ಯೇಕ ಪಾಲಿಕೆ ಹೋರಾಟಕ್ಕೆ ಮುಂದಾಗಿದ್ದಾರೆ.
ಈ ಸಂಬಂಧ ಶಾಸಕ ಅರವಿಂದ ಬೆಲ್ಲದ್ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶಗೆ ಪತ್ರ ಬರೆದು ಧಾರವಾಡವನ್ನು ಪ್ರತ್ಯೇಕ ಪಾಲಿಕೆಯಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿದ್ದಾರೆ.
ʼಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ನಮ್ಮ ರಾಜ್ಯದಲ್ಲಿ ಎರಡನೇ ಬೃಹತ್ ಮಹಾನಗರ ಪಾಲಿಕೆಯಾಗಿದೆ. ಈ ಪ್ರದೇಶವು ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದು, ಹುಬ್ಬಳ್ಳಿ ಮತ್ತು ಧಾರವಾಡ ಸಮೀಪದ ಅನೇಕ ಹಳ್ಳಿಗಳು ಪಾಲಿಕೆಗೆ ಸಮೀಪವಾಗುತ್ತಿವೆ. ಜನಸಂಖ್ಯೆಯು ಕೂಡ ಹೆಚ್ಚಿನ ಪ್ರಮಾಣದಲ್ಲಿದ್ದು, ಕೈಗಾರಿಕೆ ವಸತಿ ಹಾಗೂ ಶಿಕ್ಷಣದ ಎಲ್ಲ ಕ್ಷೇತ್ರಗಳು ಬೃಹತ್ ಆಕಾರವಾಗಿ ಬೆಳೆಯುತ್ತಿವೆ. ಸಾರ್ವಜನಿಕರ ಬೇಡಿಕೆಯು ಸಹ ಧಾರವಾಡಕ್ಕೆ ಪ್ರತ್ಯೇಕವಾಗಿ ಮಹಾನಗರ ಪಾಲಿಕೆಯಾಗುವುದರಿಂದ ಅನೇಕ ಅಭಿವೃದ್ಧಿ ಕಾರ್ಯಗಳೊಂದಿಗೆ ಸಾರ್ವಜನಿಕರ ಸಮಸ್ಯೆಗಳು ಕೂಡ ಶೀಘ್ರವಾಗಿ ಇತ್ಯರ್ಥವಾಗುವುದೆಂಬ ಅಭಿಪ್ರಾಯ ಹೊಂದಿರುತ್ತಾರೆ. ಪ್ರತ್ಯೇಕ ಮಹಾನಗರ ಪಾಲಿಕೆ ಸ್ಥಾಪಿಸುವುದು ಹಲವಾರು ಸಂಘಟನೆಗಳ ಬೇಡಿಕೆ ಕೂಡ ಆಗಿರುತ್ತದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಧಾರವಾಡದ ಸರ್ವತೋಮುಖ ಅಭಿವೃದ್ಧಿಯನ್ನು ಗಣನೆಗೆ ತೆಗೆದುಕೊಂಡು ಧಾರವಾಡಕ್ಕೆ ಪ್ರತ್ಯೇಕವಾದ ಮಹಾನಗರ ಪಾಲಿಕೆಯನ್ನು ಸ್ಥಾಪಿಸಲೇಬೇಕುʼ ಎಂದು ಅರವಿಂದ ಬೆಲ್ಲದ್ ಪತ್ರದಲ್ಲಿ ಆಗ್ರಹಿಸಿದ್ದಾರೆ.