ಫಾರಂ ನಂ-3 ಇನ್ನೂ ಎರಡು ತಿಂಗಳಲ್ಲಿ ಸಮಸ್ಯೆ ಪರಿಹಾರ: ಸಚಿವ ರಹೀಂ ಖಾನ್
ಬೆಳಗಾವಿ: ರಾಜ್ಯದಲ್ಲಿನ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಫಾರಂ ನಂ-3 ವಿತರಣೆಯಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಇನ್ನೂ ಎರಡು ತಿಂಗಳ ಒಳಗಾಗಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಸಚಿವ ರಹೀಂ ಖಾನ್ ಭರವಸೆ ನೀಡಿದ್ದಾರೆ.
ಶುಕ್ರವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಆಡಳಿತ ಪಕ್ಷದ ಸದಸ್ಯ ಭೀಮಣ್ಣ ನಾಯಕ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಫಾರಂ ನಂ-3 ಸಮಸ್ಯೆ ರಾಜ್ಯಾದ್ಯಂತ ಗಂಭೀರ ಸ್ವರೂಪದ ಸಮಸ್ಯೆಯಾಗಿದೆ. ಅದರ ನಿವಾರಣೆಗಾಗಿ ಸಂಪುಟ ಉಪಸಮಿತಿಯನ್ನು ರಚಿಸಲಾಗಿದೆ. ಈಗಾಗಲೇ ಎರಡು ಸಭೆಗಳಾಗಿದ್ದು, ಇನ್ನೂ ಏಳೆಂಟು ದಿನಗಳಲ್ಲಿ ಮೂರನೇ ಸಭೆ ನಡೆಯಲಿದೆ. ಅಲ್ಲಿ ಸೂಕ್ತ ತೀರ್ಮಾನ ತೆಗೆದುಕೊಂಡು ಬಿಬಿಎಂಪಿಯ ಮಾದರಿಯಲ್ಲಿ ‘ಬಿ’ ಖಾತಾಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
‘ಈ ಹಿಂದೆ ಹಳೆಯ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಯೋಜಿತ ನಕ್ಷೆಗಳಿರುವುದಿಲ್ಲ. ಫಾರಂ-ಸಿ ನೀಡಲು ಯೋಜಿತ ನಕ್ಷೆ, ನಿರಪೇಕ್ಷಣಾ ಪತ್ರ ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ. ಅವುಗಳು ಲಭ್ಯವಿಲ್ಲದ ಕಾರಣ ಸಮಸ್ಯೆ ಹೆಚ್ಚಾಗಿದೆ. ಶೀಘ್ರದಲ್ಲೇ ನಿರ್ಧಾರ ತೆಗೆದುಕೊಂಡು 2 ತಿಂಗಳೊಳಗಾಗಿ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.