ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಪ್ರಕರಣ | ತನಿಖೆಗೆ ಎಸ್ಐಟಿ ರಚನೆ
Photo : NDTV
ಬೆಂಗಳೂರು : ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಹಾಸನ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಗರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ(ಎಸ್.ಐ.ಟಿ) ರಚಿಸಿ ಅಧಿಕಾರಿಗಳನ್ನು ನೇಮಿಸಿದೆ.
ಇಂದು (ಎ.28) ಸರ್ಕಾರವು ಹೊರಡಿಸಿರುವ ವಿಶೇಷ ನಡಾವಳಿಯಲ್ಲಿ ಐಪಿಎಸ್ ಅಧಿಕಾರಿಗಳಾದ ಬಿಜಯ್ ಕುಮಾರ್ ಸಿಂಗ್,ಸುಮನ್ ಡಿ. ಪನ್ಸೇಕರ್ ಮತ್ತು ಸೀಮಾ ಲಾಟ್ಕರ್ ಅವರನ್ನು ತನಿಖೆಗೆ ನೇಮಿಸಿರುವುದಾಗಿ ತಿಳಿಸಿದೆ.
ವಿಶೇಷ ತನಿಖಾ ತಂಡ(ಎಸ್ಐಟಿ) ತನಿಖೆ ಆರಂಭಿಸುವ ಮೊದಲೇ ಪ್ರಕರಣದಲ್ಲಿ ಹೆಸರು ಕೇಳಿಬಂದಿದೆ ಎನ್ನಲಾದ ಹಾಲಿ ಸಂಸದ ಹಾಗೂ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯೂ ಆಗಿದ್ದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದು, ಇದು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಈ ರೀತಿಯ ಕೃತ್ಯ ಪ್ರಪಂಚದಲ್ಲೇ ಮೊದಲ ಬಾರಿ ನಡೆದಿದೆ : ನಾಗಲಕ್ಷ್ಮಿ ಚೌದರಿ
ಸಾವಿರಾರು ಮಹಿಳೆಯರು ಒಬ್ಬನ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅವರನ್ನು ಹೆದರಿಸಿ ಈ ರೀತಿಯ ಕೃತ್ಯ ಎಸಗಲಾಗಿದ್ದು, ನನ್ನ ಪ್ರಕಾರ ಇದು ಪ್ರಪಂಚದಲ್ಲೇ ಮೊದಲಾರಿಗೆ ನಡೆದಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಈ ರೀತಿಯ ಮಹಿಳೆಯರ ಮೇಲೆ ಅತ್ಯಾಚಾರ ನಮ್ಮ ಮಣ್ಣಿನಲ್ಲಿ ನಡೆದಿರುವುದು. ನಾಗರಿಕ ಸಮಾಜಕ್ಕೆ ಅವಮಾನ. ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಮಹಿಳೆಯರ ಅಸಹಾಯಕತೆಯನ್ನು ಬಳಸಿಕೊಂಡು ಈ ರೀತಿಯ ಲೈಂಗಿಕ ಚಿತ್ರೀಕರಣ ಮಾಡಿರುವುದು ಶೀಘ್ರದಲ್ಲೆ ಎಲ್ಲವೂ ಗೊತ್ತಾಗುತ್ತದೆ.
ಈ ಕುರಿತು ಸಿಎಂ, ಗೃಹ ಸಚಿವರಿಗೆ ಪತ್ರ ಬರೆದಿದ್ದು, ಸಿಎಂ ಇದರ ಸೂಕ್ಷ್ಮತೆ ಅರಿತು ಎಸ್ಐಟಿ ತನಿಖಾ ತಂಡ ರಚಿಸಿದ್ದಾರೆ. ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ತೃಪ್ತಿ ತಂದಿದೆ. ಶೀಘ್ರ ಸಂತ್ರಸ್ತ ಮಹಿಳೆಯರಿಗೆ ನ್ಯಾಯಸಿಗಬೇಕು. ಈಗಾಗಲೇ ಸಂತ್ರೆಸ್ತೆ ದೂರು ನೀಡಿದ್ದು, ಸಂತ್ರಸ್ತೆಯ ಹೇಳಿಕೆಗಳು ರೇಕಾರ್ಡ್ ಆಗ್ತಾ ಇವೆ. ಆರೋಪಿಯ ಮೇಲೆ ಎಫ್ಐಆರ್ ದಾಖಲಾಗುತ್ತೆ ಎಂದು ಹೇಳಿದರು.