ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಆಪ್ತ, ಗುತ್ತಿಗೆದಾರನ ಕೊಲೆಗೆ ಯತ್ನ ಆರೋಪ; ದೂರು ದಾಖಲು
ಹಾಸನ, : ಮಾಜಿ ಸಚಿವ ಎಚ್ಡಿ ರೇವಣ್ಣ ಅವರ ಆಪ್ತರೂ ಆಗಿರುವ ಪ್ರಥಮ ದರ್ಜೆ ಗುತ್ತಿಗೆದಾರನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ, ಸೂರನಹಳ್ಳಿ ಗ್ರಾಮದ ಬಳಿ ಮಂಗಳವಾರ ವರದಿಯಾಗಿದೆ.
ಅಶ್ವಥ್ ದಾಳಿಗೊಳಗಾಗಿರುವ ವ್ಯಕ್ತಿ ಯಾಗಿದ್ದು, ಮಂಗಳವಾರ ಸಂಜೆ ಎಚ್.ಡಿ.ರೇವಣ್ಣ ಅವರ ನಿವಾಸದಿಂದ ಚನ್ನರಾಯಪಟ್ಟಣದ ತಮ್ಮ ನಿವಾಸಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ದಾಳಿ ನಡೆದಿದೆ ಎಂದು ಹೇಳಲಾಗಿದೆ.
ಘಟನೆ ಸಂಬಂಧ ಅಶ್ವಥ್ ಅವರು ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ʼಇಂದು ಸಂಜೆ ಹಾಸನದಿಂದ ಎಚ್.ಡಿ.ರೇವಣ್ಣ ಅವರ ಜೊತೆ ಹೊಳೆನರಸೀಪುರದ ಮನೆಗೆ ತೆರಳಿದ್ದ ಪ್ರಥಮ ದರ್ಜೆ ಗುತ್ತಿಗೆದಾರ ಅಶ್ವಥ್, ಕೆಲಕಾಲ ಅವರ ನಿವಾಸದಲ್ಲಿದ್ದರು. ಬಳಿಕ ಚನ್ನರಾಯಪಟ್ಟಣದ ತಮ್ಮ ನಿವಾಸಕ್ಕೆ ಫಾರ್ಚೂನರ್ ಕಾರಿನಲ್ಲಿ ತೆರಳುವ ಮಾಹಿತಿ ತಿಳಿದ ಐದಾರು ಮಂದಿ ಇದ್ದ ದುಷ್ಕರ್ಮಿಗಳ ತಂಡ, ಸೂರನಹಳ್ಳಿ ಗ್ರಾಮದ ಹಂಪ್ಸ್ ಬಳಿ ಕಾರಿನ ಮೇಲೆ ದಾಳಿ ನಡೆಸಿದ್ದಾರೆʼ ಎಂದು ಆರೋಪಿಸಲಾಗಿದೆ.
ʼಕಾರಿನ ಗ್ಲಾಸ್ ಮೇಲೆ ಕಲ್ಲು ಎತ್ತಿಹಾಕಿ ಮಾರಕಾಸ್ತ್ರಗಳಿಂದ ಕೊಲೆ ಮಾಡಲು ಮುಂದಾಗಿದ್ದಾರೆ. ಕೂಡಲೇ ಕಾರು ಹಿಂದಕ್ಕೆ ತೆಗೆದು ವೇಗದಲ್ಲಿ ಕಾರು ಚಲಾಯಿಸಿ ತಪ್ಪಿಸಿಕೊಂಡಿದ್ದಾರೆ. ಆದರೂ ಬೆನ್ನು ಬಿಡದ ದುಷ್ಕರ್ಮಿಗಳು, ಮೂಡಲಹಿಪ್ಪೆ ಗ್ರಾಮದವರೆಗೂ ಅಶ್ವಥ್ ಅವರನ್ನು ಹಿಂಬಾಲಿಸಿದ್ದಾರೆʼ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆಪ್ತನ ಮೇಲೆ ದಾಳಿ ನಡೆಸಿದ ಬಗ್ಗೆ ಮಾಹಿತಿ ತಿಳಿದ ರೇವಣ್ಣ ಅವರು ಅಶ್ವಥ್ ಅವರನ್ನ ಭೇಟಿಯಾಗಿ ವಿಚಾರಿಸಿ ಆರೋಪಿಗಳನ್ನು ಬಂಧಿಸುವಂತೆ ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು ಸುತ್ತಮುತ್ತಲಿನ ರಸ್ತೆಯ ಎಲ್ಲಾ ಸಿಸಿ ಕ್ಯಾಮರಗಳನ್ನು ಪರಿಶೀಲಿಸುತ್ತಿದ್ದಾರೆ.