ಬ್ಯಾಂಕ್ ಗೆ ವಂಚನೆ ಆರೋಪ: ಬಿಜೆಪಿ ನಾಯಕ ಕೃಷ್ಣಯ್ಯ ಶೆಟ್ಟಿ, ಸಹಚರರಿಗೆ 3 ವರ್ಷ ಜೈಲು ಶಿಕ್ಷೆ

ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ
ಬೆಂಗಳೂರು: ನಕಲಿ ವೇತನ ಪ್ರಮಾಣ ಪತ್ರ ಸಲ್ಲಿಸಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಿಂದ 7.17 ಕೋಟಿ ಹಣ ದುರ್ಬಳಕೆ ಮಾಡಿರುವ ಪ್ರಕರಣದಲ್ಲಿ ಬಿಜೆಪಿ ನಾಯಕ ಎಸ್ಎನ್ ಕೃಷ್ಣಯ್ಯ ಶೆಟ್ಟಿ ಸೇರಿ ನಾಲ್ವರನ್ನು ದೋಷಿಗಳೆಂದು ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಗುರುವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಪ್ರಕಟಿಸಿದ್ದಾರೆ.
ಪ್ರಕರಣದ ಮೊದಲನೆ ಆರೋಪಿ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವ್ಯವಸ್ಥಾಪಕ ಎಂಟಿವಿ ರೆಡ್ಡಿ, ಕೃಷ್ಣಯ್ಯ ಶೆಟ್ಟಿ, ಕೆ.ಮುನಿರಾಜು, ಕೆ.ಶ್ರೀನಿವಾಸ್ ಅವರನ್ನು ದೋಷಿಗಳು ಎಂದು ನ್ಯಾಯಾಲಯ ತೀರ್ಮಾನಿಸಿದೆ. ಜತೆಗೆ, ಕೃಷ್ಣಯ್ಯ ಶೆಟ್ಟಿಗೆ ಮೂರು ವರ್ಷ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದು, ಎಲ್ಲ ಆರೋಪಿಗಳಿಗೂ ತಲಾ 1 ಲಕ್ಷ ರೂ. ದಂಡ ವಿಧಿಸಿದೆ. ಈ ಪ್ರಕರಣದ ಐದನೆ ಆರೋಪಿ ಬಿಡ್ಡಪ್ಪ ನಿಧನ ಹೊಂದಿದ ಹಿನ್ನೆಲೆಯಲ್ಲಿ ಅವರನ್ನು ಕೈಬಿಡಲಾಗಿದೆ.
ಏನಿದು ಪ್ರಕರಣ?:
ಕೃಷ್ಣಯ್ಯ ಶೆಟ್ಟಿ ಮತ್ತು ಇತರ ಆರೋಪಿಗಳು ಮೆಸರ್ಸ್ ಬಾಲಾಜಿ ಕೃಪಾ ಎಂಟರ್ಪ್ರೈಸಸ್ ಮೂಲಕ ನಕಲಿ ವೇತನ ಸರ್ಟಿಫಿಕೇಟ್ಗಳು, ಎಚ್ಎಎಲ್, ಐಟಿಐ, ಬಿಇಎಂಎಲ್, ಬಿಎಂಟಿಸಿ, ಬೆಸ್ಕಾಂ, ಎಡಿಇ, ಕೆಎಸ್ಸಾರ್ಟಿಸಿ, ಬಿಎಸ್ಎನ್ಎಲ್ ನೋವಾ ಟೆಕ್ನಾಲಜೀಸ್ ಇತ್ಯಾದಿ ಸಂಸ್ಥೆಗಳಲ್ಲಿ ಕೆಲಸ ಮಾಡದ ಉದ್ಯೋಗಿಗಳ ಫಾರ್ಮ್ ನಂಬರ್ 16 ಸಲ್ಲಿಸಿ 7.17 ಕೋಟಿ ಮೊತ್ತದ 181 ಗೃಹ ಸಾಲಗಳನ್ನು ಪಡೆದಿದ್ದಾರೆ.
ಈ ಪೈಕಿ ವಿವಿಧ ಖಾತೆಗಳ 3.53 ಕೋಟಿ ರೂ.ಸಾಲ ಬಾಕಿ ಉಳಿಸಿಕೊಂಡಿದ್ದು, ಆ ಮೂಲಕ ಕಾನೂನುಬಾಹಿರವಾಗಿ ಬ್ಯಾಂಕ್ಗೆ ನಷ್ಟ ಉಂಟು ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಬೆಂಗಳೂರಿನ ಕೆ.ಜಿ.ರಸ್ತೆಯಲ್ಲಿದ್ದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಮುಖ್ಯ ವಿಚಕ್ಷಣಾಧಿಕಾರಿಯು 2008ರಲ್ಲಿ ದೂರು ಸಲ್ಲಿಸಿದ್ದರು.