ಬಿಜೆಪಿಯಿಂದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಉಚ್ಚಾಟನೆ
ಬೆಂಗಳೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಆರು ವರ್ಷಗಳ ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಮ್ಮ ಪುತ್ರ ಕೆ.ಇ.ಕಾಂತೇಶ್‌ಗೆ ಹಾವೇರಿ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪುವಂತೆ ಮಾಡಿದ್ದಾರೆ ಎಂದು ಆರೋಪಿಸಿ ಈಶ್ವರಪ್ಪ ಬಹಿರಂಗ ಸಮರ ಸಾರಿದ್ದಾರೆ.
ಅಲ್ಲದೆ, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಯಡಿಯೂರಪ್ಪ ಹಿರಿಯ ಪುತ್ರ ಹಾಗೂ ಹಾಲಿ ಸಂಸದ ಬಿ.ವೈ.ರಾಘವೇಂದ್ರರನ್ನು ಸೋಲಿಸುವ ಶಪಥ ಮಾಡಿ ಚುನಾವಣಾ ಕಣದಲ್ಲಿದ್ದಾರೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೂ ಈಶ್ವರಪ್ಪ ಅವರಿಗೆ ಆಹ್ವಾನ ನೀಡಿರಲಿಲ್ಲ.
ಚನ್ನಪಟ್ಟಣದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಪರವಾಗಿ ಚುನಾವಣಾ ರ‍್ಯಾಲಿ ನಡೆಸಲು ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈಶ್ವರಪ್ಪರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಹೊಸದಿಲ್ಲಿಗೆ ಬರುವಂತೆ ಆಹ್ವಾನ ನೀಡಿದ್ದರು. ಆದರೆ, ವರಿಷ್ಠರ ಭೇಟಿಗೆ ದಿಲ್ಲಿಗೆ ತೆರಳಿದ್ದ ಈಶ್ವರಪ್ಪಗೆ ಅಮಿತ್ ಶಾ ಭೇಟಿ ಸಾಧ್ಯವಾಗದೆ ಬರಿಗೈಯಲ್ಲಿ ಹಿಂದಿರುಗಿದ್ದರು.
ಸ್ವತಃ ನರೇಂದ್ರ ಮೋದಿ ಬಂದು ಚುನಾವಣೆಯಿಂದ ಹಿಂದೆ ಸರಿಯುವಂತೆ ಹೇಳಿದರೂ ತಾನು ಇಟ್ಟ ಹೆಜ್ಜೆ ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ. ನನ್ನ ಸ್ಪರ್ಧೆ ಹಿಂದುತ್ವ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಧ್ವನಿಯಾಗಿದೆ. ಶಿಕಾರಿಪುರದಲ್ಲೆ ತಂದೆ ಹಾಗೂ ಮಕ್ಕಳ(ಯಡಿಯೂರಪ್ಪ, ರಾಘವೇಂದ್ರ, ವಿಜಯೇಂದ್ರ) ಶಿಕಾರಿ ಮಾಡುತ್ತೇನೆ ಎಂದು ಈಶ್ವರಪ್ಪ ತಮ್ಮ ಚುನಾವಣಾ ಭಾಷಣಗಳಲ್ಲಿ ಅಬ್ಬರಿಸಿದ್ದರು.
ಉಚ್ಚಾಟನೆ ಆದೇಶದಲ್ಲಿ ಏನಿದೆ?:ಪಕ್ಷದ ಸೂಚನೆಯನ್ನು ಕಡೆಗಣಿಸಿ ಪ್ರಸಕ್ತ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಮದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪಕ್ಷದ ಮುಜುಗರಕ್ಕೆ ಕಾರಣರಾಗಿದ್ದೀರಿ. ಇದು ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ. ಆದುದರಿಂದ, ತಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಆದೇಶ ಹೊರಡಿಸಿದ್ದಾರೆ.
ಚಿಹ್ನೆ ನೀಡಿದ ಚುನಾವಣ ಆಯೋಗ
ಚುನಾವಣಾ ಆಯೋಗ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಅವರಿಗೆ ಚುನಾವಣೆ ಚಿಹ್ನೆ ನೀಡಿದ್ದು, ”ಕೈ ಕಟ್ಟಿಕೊಂಡ ರೈತ ಮತ್ತು ಎರಡು ಕಬ್ಬುಗಳು” ಇರುವ ಚಿಹ್ನೆಯನ್ನು ನೀಡಲಾಗಿದೆ.