ಲೋಕಸಭೆಯಲ್ಲಿ ಮಾಜಿ ಸಂಸದ ಆರ್.ಧ್ರುವನಾರಾಯಣಗೆ ಸಿಗದ ಸಂತಾಪ ಸೂಚನೆ; ಸ್ಪೀಕರ್ ಗೆ ಪತ್ರ ಬರೆದ ಪ್ರತಾಪ್ ಸಿಂಹ
ಮೈಸೂರು,ಜು.21: ಇತ್ತೀಚೆಗೆ ನಿಧನರಾದ ಮಾಜಿ ಸಂಸದ ಹಾಗೂ ಕಾಂಗ್ರೆಸ್ ನಾಯಕ ಆರ್.ಧ್ರುವನಾರಾಯಣ ಅವರ ಹೆಸರು ಲೋಕಸಭೆಯ ಸಂತಾಪ ಸೂಚನೆ ನಿಲುವಳಿಯಿಂದ ಬಿಟ್ಟು ಹೋಗಿತ್ತು. ಈ ಹಿನ್ನಲೆಯಲ್ಲಿ ಆರ್.ಧ್ರುವನಾರಾಯಣ ಅವರಿಗೆ ಸಂತಾಪ ಸೂಚಿಸಬೇಕು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.
ಗುರುವಾರದಿಂದ ಸಂಸತ್‍ನ ಮುಂಗಾರು ಅಧಿವೇಶನ ಆರಂಭವಾಗಿದ್ದು, ಅಧಿವೇಶನದ ಆರಂಭದ ದಿನ ಮೃತ ಮಾಜಿ ಮತ್ತು ಹಾಲಿ ಸಂಸದರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ವಾಡಿಕೆ. ಆದರೆ, ಗುರುವಾರ ಸಂತಾಪ ಸೂಚನೆ ನಿಲುವಳಿಯಲ್ಲಿ ಎರಡು ಬಾರಿ ಲೋಕಸಭಾ ಸಂಸದರಾಗಿರುವ ಆರ್.ಧ್ರುವನಾರಯಣ ಹೆಸರು ಇದ್ದಿಲ್ಲ. ಈ ಹಿನ್ನಲೆ ಪ್ರತಾಪ್ ಸಿಂಹ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.
ಸಂಸದ ಪ್ರತಾಪ್ ಸಿಂಹ ಅವರು ಬರೆದ ಪತ್ರದಲ್ಲಿ ಕೆಪಿಸಿಸಿಯ ಮಾಜಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರು ಮಾರ್ಚ್ 11, 2023 ರಂದು ಮೈಸೂರಿನಲ್ಲಿ ತಮ್ಮ 61ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಎರಡು ಬಾರಿ ಕರ್ನಾಟಕದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದು, ಎರಡು ಬಾರಿ ಶಾಸಕರಾಗಿಯೂ ಕೂಡ ಆಯ್ಕೆಯಾಗಿದ್ದರು ಎಂದು ಹೇಳಿದ್ದಾರೆ.
ಧ್ರುವನಾರಾಯಣ ಅವರು ಕರ್ನಾಟಕ ಕಾಂಗ್ರೆಸ್‍ನ ಮುಂಚೂಣಿ ನಾಯಕರಲ್ಲಿ ಒಬ್ಬರು. ಅವರ ರಾಜಕೀಯ ಜೀವನದುದ್ದಕ್ಕೂ ಧ್ರುವನಾರಾಯಣ ಅವರು ನಿಷ್ಠಾವಂತ ಪ್ರಾಮಾಣಿಕ ಕಾರ್ಯಕರ್ತರಾಗಿದ್ದು, ಪಕ್ಷ ಮತ್ತು ರಾಜ್ಯಕ್ಕಾಗಿ ಶ್ರಮಿಸಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸಲು ಸದಾ ತಯಾರಾಗಿರುತ್ತಿದ್ದರು. ತಮ್ಮ ಉತ್ತಮ ಕೆಲಸಗಳಿಂದ ಅಭಿವೃದ್ಧಿ ಕಾರ್ಯಗಳಿಂದ ಅವರನ್ನು ಜನ ನೆನಪಿನಲ್ಲಿಟ್ಟುಕೊಂಡಿದ್ದಾರೆ ಎಂದಿದ್ದಾರೆ.
ತಮ್ಮ ಸಂಸದೀಯ ಜೀವನದಲ್ಲಿ ಧ್ರುವನಾರಾಯಣ ಅವರು ಮೂಲಸೌಕರ್ಯ ವಂಚಿತ ಹಾಗೂ ಕೆಳವರ್ಗದ ಜನರ ಸಮಸ್ಯೆಗಳನ್ನು ಸದನದ ಗಮನಕ್ಕೆ ಹಲವು ಸಲ ತಂದಿದ್ದಾರೆ. ಹಿರಿಯ ಸ್ನೇಹಿತನನ್ನು ಕಳೆದುಕೊಂಡು ಬಹಳ ದುಃಖವಾಗಿದೆ. ಅವರು ನನಗೆ ಮಾರ್ಗಸೂಚಕರು ಕೂಡ ಆಗಿದ್ದರು. ಸದನದಲ್ಲಿ ಅವರಿಗೆ ಸಂತಾಪ ಸೂಚಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.