ಉದ್ಯಮಿಗಳಿಗೆ ಸಹಾಯ ಮಾಡುವ ನೆಪದಲ್ಲಿ ವಂಚನೆ: ಪ್ರಕರಣ ದಾಖಲು
ಬೆಂಗಳೂರು: ಉದ್ಯಮಿಗಳನ್ನು ಪರಿಚಯಿಸಿಕೊಂಡು ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿದ್ದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ವರದಿಯಾಗಿದೆ.
ಯುಸೂಫ್ ಸುಬ್ಬಯ್ಯಕಟ್ಟೆ ಎಂಬುವವನೇ ವಂಚಿಸಿರುವ ಆರೋಪಿ. ಉದ್ಯಮಿ ಶಾಜಿ ಕೃಷ್ಣನ್ ಎಂಬುವವರು ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ..
ಹೋಟೆಲ್ ಉದ್ಯಮಿಯಾಗಿರುವ ಶಾಜಿ ಕೃಷ್ಣನ್ ಅವರಿಗೆ ಮೊದಲು ಪರಿಚಯವಾಗಿ ಬಳಿಕ ಅವರ ದಾಖಲೆಗಳ ಮೂಲಕ ಬ್ಯಾಂಕ್‍ನಲ್ಲಿ 2.4 ಕೋಟಿ ರೂ. ಸಾಲ ಪಡೆದು ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸಾಲ ಪಡೆಯಲು ಪ್ರಯತ್ನಿಸುತ್ತಿದ್ದಾಗ ತನಗೆ ಕೆನರಾ ಬ್ಯಾಂಕ್‍ನ ಹಲಸೂರು ಶಾಖೆಯ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಎಲ್ಲಾ ಅಧಿಕಾರಿಗಳು ಪರಿಚಯ ಇದೆ ಎಂದು ಆರೋಪಿ ನಂಬಿಸಿದ್ದ. ಬಳಿಕ ಮ್ಯಾನೇಜರ್ ಬಳಿ ಕರೆದೊಯ್ದು ದಾಖಲೆಗಳನ್ನು ಪಡೆದುಕೊಂಡಿದ್ದ. ಆದರೆ ನನ್ನನ್ನು ಖಾತರಿದಾರರನ್ನಾಗಿಸಿ ನನ್ನ ದಾಖಲೆಗಳನ್ನು ಸಲ್ಲಿಸಿ 2.4 ಕೋಟಿ ರೂ. ಸಾಲ ಪಡೆದುಕೊಂಡಿದ್ದ. ಅದೇ ಹಣದಲ್ಲಿ ಮಲ್ಲೇಶ್ವರಂನ ಖಾಸಗಿ ಅಪಾರ್ಟ್‍ಮೆಂಟ್‍ನಲ್ಲಿ ಫ್ಲ್ಯಾಟ್ ಖರೀದಿಸಿದ್ದ.
ಬಳಿಕ ಸಾಲ ಮರು ಪಾವತಿ ಮಾಡಿರಲಿಲ್ಲ. ಕೆಲ ದಿನಗಳ ಬಳಿಕ ಬ್ಯಾಂಕ್‍ಗೆ ತೆರಳಿದ್ದಾಗ ವಂಚನೆಯಾಗಿರುವುದು ಬಯಲಾಗಿತ್ತು. ಆರೋಪಿಯನ್ನು ಪ್ರಶ್ನಿಸಿದಾಗ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ. ಆರೋಪಿಯ ಕೃತ್ಯದಿಂದ ತಮ್ಮ ಉದ್ಯಮಕ್ಕೆ ಹಿನ್ನಡೆಯಾಗಿದೆ ಎಂದು ಮಲ್ಲೇಶ್ವರಂ ಠಾಣೆಗೆ ಶಾಜಿ ಕೃಷ್ಣನ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆರೋಪಿಯು ಮೊದಲು ಉದ್ಯಮಿಗಳನ್ನು ಪರಿಚಯಿಸಿಕೊಂಡು ನಂತರ ಆ ಉದ್ಯಮಿಗಳಿಗೆ ಅಗತ್ಯವಿರುವ ಸಹಾಯ ಮಾಡುವ ನೆಪದಲ್ಲಿ ಆಪ್ತನಾಗಿ ಬಳಿಕ ವಂಚಿಸುತ್ತಿದ್ದ. ಇದೇ ರೀತಿ ಟ್ರಾವೆಲ್ಸ್ ಕಂಪೆನಿ ಮಾಲಕರೊಬ್ಬರ ಬಳಿ ‘ಜಿಎಸ್‍ಟಿ ಕಮಿಷನರ್ ತನಗೆ ಪರಿಚಯವಿದ್ದಾರೆ. ತಾನು ಶೇ.50ರಷ್ಟು ಜಿಎಸ್‍ಟಿ ಕಡಿಮೆ ಮಾಡಿಸುತ್ತೇನೆ' ಎಂದು ನಂಬಿಸಿ ಸುಮಾರು 20 ಲಕ್ಷ ರೂ. ಹಣ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದೆ.
ಅದೇ ರೀತಿಯಲ್ಲಿ ಶಿವಾನಂದ ಮೂರ್ತಿ ಎಂಬುವರಿಗೆ ಸೆಕೆಂಡ್ ಹ್ಯಾಂಡ್ ಫಾರ್ಚುನರ್ ಕಾರು ಕೊಡಿಸುವುದಾಗಿ 5 ಲಕ್ಷ ರೂ. ಪಡೆದು ವಂಚಿಸಿದ್ದ ಸಂಬಂಧ ಆಗಸ್ಟ್ ನಲ್ಲಿ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ ಎಂದು ಗೊತ್ತಾಗಿದೆ.