ಹೃದಯಾಘಾತ ತಡೆಯಲು ಉಚಿತ ಚುಚ್ಚುಮದ್ದು: ಸಚಿವ ದಿನೇಶ್ ಗುಂಡೂರಾವ್
ʼಪುನೀತ್ ಹೃದಯ ಜ್ಯೋತಿʼ ಯೋಜನೆಗೆ ಚಾಲನೆ
Photo: X/@dineshgrao
ಧಾರವಾಡ: ಹಠಾತ್ ಹೃದಯಾಘಾತಗಳನ್ನು ತಡೆಯಲು ‘ಪುನೀತ್ ರಾಜಕುಮಾರ್ ಹೃದಯ ಜ್ಯೋತಿ’ ಯೋಜನೆಯಡಿ ಉಚಿತ ಜೀವರಕ್ಷಕ ಚುಚ್ಚುಮದ್ದುಗಳನ್ನ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಶುಕ್ರವಾರ ನಗರದ ಎಸ್ಡಿಎಂ ಕಾಲೇಜಿನ ಡಿ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ‘ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ’ಗೆ ಚಾಲನೆ ನೀಡಿ ಮಾತನಾಡಿದ ಅವರು, ಯಾರಿಗಾದರೂ ಎದೆನೋವು ಕಾಣಿಸಿಕೊಂಡಾಗ ನಿರ್ಲಕ್ಷ್ಯ ಮಾಡದೆ ಸರಕಾರಿ ಆಸ್ಪತ್ರೆಗಳಲ್ಲಿ ಇಸಿಜಿ ಮಾಡಿಸಿಕೊಳ್ಳುವಂತೆ ಕೋರಿದರು.
ಪುನೀತ್ ಹೃದಯ ಜ್ಯೋತಿ ಯೋಜನೆ ಮೂಲಕ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲೆ ಹಠಾತ್ ಹೃದಯಾಘಾತ ಆಗದಂತೆ ಜೀವರಕ್ಷಕ ಚುಚ್ಚುಮದ್ದುಗಳನ್ನು ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಹೃದಯಾಘಾತ ತಡೆಯುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ದುಬಾರಿ ಬೆಲೆಯ ಚುಚ್ಚುಮದ್ದು ಟೆನೆಕ್ಟೆಪ್ಲೇಸ್ ಅನ್ನು ಸರಕಾರಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಉಚಿತವಾಗಿ ಪಡೆಯಬಹುದಾಗಿದೆ. ಗ್ರಾಮೀಣ ಪ್ರದೇಶದ ಜನರು ಇದರ ಉಪಯೋಗ ಪಡೆಯುವಂತೆ ದಿನೇಶ್ ಗುಂಡೂರಾವ್ ಮನವಿ ಮಾಡಿದರು.
ಏನಿದು ಪುನೀತ್ ಹೃದಯ ಜ್ಯೋತಿ ಯೋಜನೆ?: ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಯೋಜನೆ ಜಾರಿಗೆ ತರಲಾಗಿದ್ದು, 71 ತಾಲೂಕು ಆಸ್ಪತ್ರೆಗಳು ಸೇರಿದಂತೆ ಒಟ್ಟು 86 ಸರಕಾರಿ ಆಸ್ಪತ್ರೆಗಳನ್ನ ಸ್ಪೋಕ್ ಕೇಂದ್ರಗಳನ್ನಾಗಿ ಹಾಗೂ ಜಯದೇವ ಸೇರಿದಂತೆ 11 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನ ಹಬ್ ಕೇಂದ್ರಗಳನ್ನಾಗಿ ರಚಿಸಲಾಗಿದೆ ಎಂದು ಅವರು ಹೇಳಿದರು.
ಎದೆನೋವು ಕಾಣಿಸಿಕೊಂಡವರು ಸ್ಪೋಕ್ ಕೇಂದ್ರಗಳಿಗೆ ಭೇಟಿ ನೀಡಿದ ವೇಳೆ 6 ನಿಮಿಷದೊಳಗೆ ಅವರ ಕಂಡಿಷನ್ ಕ್ರಿಟಕಲ್ ಹಂತದಲ್ಲಿದೆಯೊ ಇಲ್ಲವೋ ಎಂಬುದನ್ನ ಎಐ ತಂತ್ರಜ್ಞಾನದ ಮೂಲಕ ಪತ್ತೆಹಚ್ಚಲಾಗುವುದು. ಟ್ರಿಕಾಗ್ ಸಂಸ್ಥೆಯವರು ಎಐ ತಂತ್ರಜ್ಞಾನದ ಮೂಲಕ ಮೇಲ್ವಿಚಾರಣೆ ನಡೆಸಿ, ಎದೆನೋವು ಕಾಣಿಸಿಕೊಂಡವರ ಇಸಿಜಿ ಪರೀಕ್ಷೆಯಲ್ಲಿ ತೀವ್ರ ಹೃದಯಾಘಾತವಾಗುವ ಮೂನ್ಸೂಚನೆಯನ್ನು ನೀಡುತ್ತಾರೆ ಎಂದು ಅವರು ಮಾಹಿತಿ ನೀಡಿದರು.
ಕ್ರಿಟಿಕಲ್ ಎಂದು ಖಚಿತವಾದ ತಕ್ಷಣವೇ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ಅನ್ನು ಸ್ಪೋಕ್ ಕೇಂದ್ರಗಳಾದ ತಾಲೂಕು ಆಸ್ಪತ್ರೆಯಲ್ಲೆ ನೀಡಲಾಗುವುದು. ಇದರಿಂದ ಹಠಾತ್ ಹೃದಯಾಘಾತವನ್ನು ತಡೆಯುವುದರೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಅತ್ಯಾದುನಿಕ ಅಂಬುಲೆನ್ಸ್ ನಲ್ಲಿ ಹಬ್ ಕೇಂದ್ರಗಳಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕಳಿಸಿಕೊಡಲಾಗುವುದು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿಯೂ ಉಚಿತ ಶಸ್ತ್ರ ಚಿಕಿತ್ಸೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಗೋಲ್ಡನ್ ಅವರ್ ಒಳಗಡೆ ಜೀವ ಉಳಿಸುವ ಚಿಕಿತ್ಸೆ ದೊರೆಯುವಂತೆ ಯೋಜನೆ ರೂಪಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಎರಡನೇ ಹಂತದ ಪ್ರಮುಖ ಅಂಶಗಳು: 15 ಜಿಲ್ಲೆಗಳಲ್ಲಿ 8 ಹಬ್ಸ್ (ದಕ್ಷಿಣ ಕನ್ನಡ, ಬೆಳಗಾವಿ, ದಾವಣಗೆರೆ, ಶಿವಮೊಗ್ಗ, ಧಾರವಾಡ, ಬಾಗಲಕೋಟೆ ಮತ್ತು ಬಳ್ಳಾರಿ), 41 ಸ್ಪೋಕ್ಸ್ (5 ಜಿಲ್ಲಾ ಮತ್ತು 36 ತಾಲೂಕು ಆಸ್ಪತ್ರೆಗಳು)ಗಳಲ್ಲಿ ಹಠಾತ್ ಹೃದಯಾಘಾತ ರೋಗಿಗಳ ಚಿಕಿತ್ಸೆಗಾಗಿ ಹೆಚ್ಚು ಪರಿಣಾಮಕಾರಿಯಾದ ಔಷಧಿ 25 ಸಾವಿರ ರೂ.ಗಳಿಂದ 30 ಸಾವಿರ ರೂ. ಮೌಲ್ಯದ ಟೆನೆಕ್ಟೆಪ್ಲೇಸ್ ಚುಚ್ಚುಮದ್ದು (30ಎಂಜಿ, 40ಎಂಜಿ) ಎಲ್ಲ ತೀವ್ರ ಹೃದಯಾಘಾತ ರೋಗಿಗಳಿಗೆ ಸ್ಪೋಕ್ಸ್ ಆಸ್ಪತ್ರೆಗಳಲ್ಲಿಯೆ ಉಚಿತವಾಗಿ ನೀಡಲಾಗುತ್ತದೆ ಎಂದು ಅವರು ಹೇಳಿದರು.
41 ಎಇಡಿ(ಆಟೋಮೆಟೆಡ್ ಎಕ್ಸ್ಟರ್ನಲ್ ಡೆಫಿಬ್ರಿಲೆಟರ್) ಸಾಧನಗಳನ್ನು ಜನದಟ್ಟನೆಯ ಸಾರ್ವಜನಿಕ ಸ್ಥಳಗಳಲ್ಲಿ (ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ವಿಮಾನ ನಿಲ್ದಾಣಗಳು, ನ್ಯಾಯಾಲಯ ಸಂಕೀರ್ಣಗಳು ಆಸ್ಪತ್ರೆಗಳಲ್ಲಿ) ಹಠಾತ್ ಹೃದಯಾಘಾತದಿಂದಾಗುವ ಮರಣಗಳನ್ನು ತಪ್ಪಿಸಲು ಅತಿ ಶೀಘ್ರದಲ್ಲಿ ಅಳವಡಿಸಲಾಗುವುದು ಎಂದು ಅವರು ಹೇಳಿದರು.