ರಾಜ್ಯದಲ್ಲಿ 137 ಅಕ್ರಮ ವಲಸಿಗರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದೇವೆ : ಜಿ.ಪರಮೇಶ್ವರ್

ಬೆಂಗಳೂರು ರಾಜ್ಯದಲ್ಲಿ ಈವರೆಗೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ 137 ಅಕ್ರಮ ವಲಸಿಗರನ್ನು ಗುರುತಿಸಿ, ಬಂಧಿಸಿ, ಕಾನೂನು ಕ್ರಮ ಕೈಗೊಂಡಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಬುಧವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಗಮನ ಸೆಳೆದ ಸೂಚನೆಗೆ ಉತ್ತರಿಸಿದ ಅವರು, ಕೆಲವು ಸಂದರ್ಭದಲ್ಲಿ ರಾಯಭಾರಿ ಕಚೇರಿಗಳಿಗೆ ಮಾಹಿತಿ ತಲುಪಿಸುತ್ತೇವೆ. ವಿದೇಶಾಂಶ ವ್ಯವಹಾರ ಇಲಾಖೆಗೂ ಮಾಹಿತಿ ನೀಡುತ್ತೇವೆ. ಅವರು ಆಯಾ ದೇಶಗಳ ರಾಯಭಾರಿ ಕಚೇರಿಗಳಿಗೆ ಮಾಹಿತಿ ನೀಡುತ್ತಾರೆ. ಅಕ್ರಮ ವಲಸಿಗರನ್ನು ಗಡಿಪಾರು ಮಾಡುವವರೆಗೆ ನಾವು ಕಾಯಬೇಕು ಎಂದು ಹೇಳಿದರು.
ಅಕ್ರಮ ವಲಸಿಗರನ್ನು ಇರಿಸಲು ನಾವು ಫಾರಿನರ್ಸ್ ಡಿಟೇಂಷನ್ ಸೆಂಟರ್ ಮಾಡಿದ್ದೇವೆ. ಆಯಾ ದೇಶಗಳಿಂದ ಅನುಮತಿ ಸಿಕ್ಕ ಕೂಡಲೆ ನಾವು ಅವರನ್ನು ಗಡಿಪಾರು ಮಾಡುತ್ತೇವೆ. ಈವರೆಗೆ ರಾಜ್ಯದಲ್ಲಿ 25 ಮಂದಿ ಪಾಕಿಸ್ತಾನದವರನ್ನು ಪತ್ತೆ ಹಚ್ಚಿ ಜೈಲಿನಲ್ಲಿಡಲಾಗಿದೆ. ಅದೇ ರೀತಿ ಬಾಂಗ್ಲಾ ದೇಶದವರನ್ನು ಬಂಧಿಸಿದ್ದೇವೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ 84, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 27, ಶಿವಮೊಗ್ಗ ಜಿಲ್ಲೆಯಲ್ಲಿ 12, ಹಾಸನ ಜಿಲ್ಲೆಯಲ್ಲಿ 3, ಮಂಗಳೂರು 1, ಉಡುಪಿಯಲ್ಲಿ 10 ಜನರನ್ನು ಬಂಧಿಸಿದ್ದೇವೆ. ಈ ಪೈಕಿ ಬಿಜಾಪುರ ಇಲ್ಲ. ಆದರೆ, ಬಿಜಾಪುರದಲ್ಲಿ 2016ರಲ್ಲಿ 33 ಜನ ಬಾಂಗ್ಲಾ ದೇಶಿಯರು ನೆಲೆಸಿದ್ದರು ಎಂದು ತಿಳಿದು ಬರುತ್ತಿದ್ದಂತೆ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ, ಅವರನ್ನು ಗಡಿಪಾರು ಮಾಡಲಾಗಿದೆ ಎಂದು ಅವರು ಹೇಳಿದರು.
ಬಿಜಾಪುರದಲ್ಲಿ ಯಾವುದೇ ಪಾಕಿಸ್ತಾನ, ಬಾಂಗ್ಲಾದೇಶಿಯರು ಇಲ್ಲ. ಭೂ ಮಾಫಿಯಾಕ್ಕೆ ಸಂಬಂಧಿಸಿದಂತೆ 27 ಪ್ರಕರಣ ದಾಖಲು ಮಾಡಲಾಗಿದೆ. ಎಂಟು ಪ್ರಕರಣಗಳಲ್ಲಿ ಎಫ್‍ಐಆರ್ ಆಗಿದೆ. 9 ಪ್ರಕರಣಗಳಲ್ಲಿ ತನಿಖೆ ಮುಂದುವರೆದಿದೆ. 170 ಜನರ ವಿರುದ್ಧ ಈ ಪ್ರಕರಣಗಳಲ್ಲಿ ಕ್ರಮ ಕೈಗೊಂಡಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.
ಎನ್‍ಐಎ ಘಟಕ ರಚನೆ ಮಾಡೋದು ಕೇಂದ್ರ ಸರಕಾರಕ್ಕೆ ಬಿಟ್ಟಿದ್ದು. ನಾವು ಪ್ರಸ್ತಾವನೆ ಸಲ್ಲಿಸಲು ಹೋಗುವುದಿಲ್ಲ. ಆಫ್ರಿಕನ್ ದೇಶಗಳಿಂದ ಡ್ರಗ್ ಪೆಡ್ಲಿಂಗ್‍ಗಳನ್ನು ನಡೆಸುತ್ತಿದ್ದಾರೆ ಅವರನ್ನು ಗುರುತಿಸಿ, ಗಡಿಪಾರು ಮಾಡಿದ್ದೇವೆ. ಅದೇ ರೀತಿ ಬಾಂಗ್ಲಾ ದೇಶಿಯರನ್ನು ಗುರುತಿಸಿ ಗಡಿಪಾರು ಮಾಡಿದ್ದೇವೆ. ಕಾಫಿ ಪ್ಲಾಂಟೇಷನ್‍ಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಅವರು ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಎಲ್ಲವನ್ನೂ ಮಾಡಿಕೊಳ್ಳುತ್ತಾರೆ ಎಂದು ಅವರು ಹೇಳಿದರು.