ಆದಾಯ ಮೀರಿ ಆಸ್ತಿ ಗಳಿಕೆ: ಭೂಮಾಪನ ಇಲಾಖೆ ಅಧೀಕ್ಷಕನಿಗೆ ಸೇರಿದ 14 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ
ಬೆಂಗಳೂರು, ಆ.22: ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಡಿ ಕೆ.ಆರ್.ಪುರ ತಾಲೂಕಿನ ಭೂಮಾಪನ ಇಲಾಖೆ ಅಧೀಕ್ಷಕ ಕೆ.ಟಿ.ಶ್ರೀನಿವಾಸ್ ಮೂರ್ತಿ ಅವರ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಪೆÇಲೀಸರು ಮಂಗಳವಾರ ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಕೆ.ಟಿ.ಶ್ರೀನಿವಾಸ ಮೂರ್ತಿ ವಿರುದ್ಧ ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ಘಟಕದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ, ಮಂಗಳವಾರ ಕಲ್ಕೆರೆ ಬಳಿಯಿರುವ ಕೆ.ಟಿ.ಶ್ರೀನಿವಾಸ್ ಮೂರ್ತಿ ನಿವಾಸ, ಹೆಣ್ಣೂರಿನಲ್ಲಿರುವ ಸಹೋದರಿ ನಿವಾಸ, ತುಮಕೂರಿನಲ್ಲಿರುವ ಸಹೋದರಿಯ ನಿವಾಸ ಸೇರಿದಂತೆ ಸುಮಾರು 14 ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ ಎಂದು ಗೊತ್ತಾಗಿದೆ.
ದಾಳಿ ವೇಳೆ ಕೆ.ಟಿ.ಶ್ರೀನಿವಾಸ್ ಮೂರ್ತಿ ಅಂಧ್ರಳ್ಳಿಯಲ್ಲಿ ನಿವೇಶನ, ಅವರ ಪತ್ನಿ ರಾಯಪುರದಲ್ಲಿ ಭೋಗ್ಯಕ್ಕೆ ಪಡೆದಿರುವ ಜಮೀನು, ಪತ್ನಿ ಹಾಗೂ ಸಹೋದರಿಯ ಸಹಭಾಗಿತ್ವದಲ್ಲಿ ಹೊಂದಿರುವ ಹೋಟೆಲ್ ಮತ್ತು ಬೋಡಿರ್ಂಗ್ಸ್, 5ಕ್ಕೂ ಅಧಿಕ ಅಬಕಾರಿ ಲೈಸೆನ್ಸ್, ಹೆಣ್ಣೂರು ಗ್ರಾಮದಲ್ಲಿ 2 ಸಾವಿರ ಚದರ ಮೀಟರ್ ವಿಸ್ತೀರ್ಣದ ಒಂದು ನಿವೇಶನ, ನಿರ್ಮಾಣ ಹಂತದ ಕಟ್ಟಡ, ಕೊತ್ತನೂರು ಗ್ರಾಮದಲ್ಲಿ ನಿವೇಶನ, ಲಕ್ಕೇನಹಳ್ಳಿಯಲ್ಲಿ ಒಂದು ಹೊಸ ಮನೆ ಹೊಂದಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ, ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಆ.17ರಂದು ರಾಜ್ಯದ 9 ಜಿಲ್ಲೆಯ 14 ಸರಕಾರಿ ಅಧಿಕಾರಿಗಳ ನಿವಾಸ ಮತ್ತು ಕಚೇರಿ ಸೇರಿ 45ಕ್ಕೂ ಹೆಚ್ಚು ಕಡೆಗಳಲ್ಲಿ ಲೋಕಾಯುಕ್ತ ಪೆÇಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ನಗದು ಹಾಗೂ ಆಸ್ತಿ-ಪಾಸ್ತಿ ಪತ್ತೆ ಮಾಡಿದ್ದರು.