ಬೆಂಗಳೂರು ನಗರದಲ್ಲಿ ‘ಗಣೇಶೋತ್ಸವ’ ಫ್ಲೆಕ್ಸ್, ಬ್ಯಾನರ್ ಹಾಕುವಂತಿಲ್ಲ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
ಬೆಂಗಳೂರು, ಸೆ.7: ‘ಗಣೇಶ ಹಬ್ಬದ ಪ್ರಯುಕ್ತ ನಗರದಲ್ಲಿ ಯಾರೂ ಫ್ಲೆಕ್ಸ್ ಹಾಗೂ ಬ್ಯಾನರ್ ಹಾಕುವಂತಿಲ್ಲ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಗೌರಿಗಣೇಶ ಹಬ್ಬ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ದಯಾನಂದ್ ನೇತೃತ್ವದಲ್ಲಿ ನಗರದ ಟೌನ್‍ಹಾಲ್‍ನಲ್ಲಿ ನಡೆದ ಸಾರ್ವಜನಿಕ ಸಭೆ ಬಳಿಕ ಮಾತನಾಡಿದ ಅವರು, ಏರಿಯಾದಲ್ಲಿ 10, 20 ಫ್ಲೆಕ್ಸ್‍ಗಳನ್ನು ಹಾಕುವಂತಿಲ್ಲ. ಗಣೇಶ ಕೂರಿಸುವ ಪೆಂಡಾಲ್‍ನಲ್ಲಿ ಕಾರ್ಯಕ್ರಮದ ಮಾಹಿತಿ ಹಾಕಬಹುದು ಎಂದರು.
ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಬೆಸ್ಕಾಂ ಇಲಾಖೆ, ಪೊಲೀಸ್ ಇಲಾಖೆ, ಬಿಬಿಎಂಪಿ ಅಧಿಕಾರಿಗಳು ಒಂದೇ ಕಡೆ ಇದ್ದು ಸಬ್ ಡಿವಿಜನ್ ಮೂಲಕ ಅನುಮತಿ ನೀಡಲಾಗುವುದು. ಬಟ್ಟೆಯಲ್ಲಿ ತಯಾರಿಸುವ ಬ್ಯಾನರ್ ಬಳಸಲು ಸೂಚಿಸಿದ್ದೇವೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.
ಮೆರವಣಿಗೆ ವಿಚಾರವಾಗಿ ಮಾತನಾಡಿದ ತುಷಾರ್ ಗಿರಿನಾಥ್, ದೊಡ್ಡ ಗಣೇಶ ಇಟ್ಟ ಕಡೆ ಈ ಹಿಂದೆ ಇರುವ ರೂಟ್‍ನಲ್ಲಿ ಸಾಗಲಿದೆ. ಅದೇ ರೀತಿಯಲ್ಲಿ ಈ ವರ್ಷವೂ ಸಾಗಲಿದೆ. ಉಳಿದಂತೆ ವಾರ್ಡ್‍ನಲ್ಲಿ ಎರಡು ಕಡೆ ಟ್ಯಾಂಕರ್ ಇರಲಿದೆ. ಸಭೆಯಲ್ಲಿ ಪಿಒಪಿ ಗಣೇಶ ಬ್ಯಾನ್ ಮಾಡಲಾಗಿದ್ದು, ಅದರ ಬದಲಾಗಿ ಮಣ್ಣಿನ ಗಣೇಶ ಕೂರಿಸಲು ಮನವಿ ಮಾಡಲಾಗಿದೆ ಎಂದು ಹೇಳಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ವರ್ಷದಂತೆ ಪಾಲಿಕೆ ವತಿಯಿಂದ ಗಣೇಶ ವಿಸರ್ಜನೆಗೆ ಸ್ಯಾಂಕಿ ಕೆರೆ, ಹಲಸೂರು ಕೆರೆ, ಯಡಿಯೂರು ಕೆರೆ, ಹೆಬ್ಬಾಳ ಕೆರೆ ಹಾಗೂ ಇತರೆ ಪ್ರಮುಖ ಕೆರೆ, ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ. ಪ್ರಮುಖ ಸ್ಥಳ, ಜಂಕ್ಷನ್ ಮತ್ತು ಅವಶ್ಯಕತೆ ಇರುವ ಕಡೆ ವಾರ್ಡ್ ವಾರು ತಾತ್ಕಾಲಿಕವಾಗಿ ಸಂಚಾರಿ ವಿಸರ್ಜನಾ ಘಟಕ(ಮೊಬೈಲ್ ಟ್ಯಾಂಕ್)ಗಳನ್ನು ಪ್ರತಿ ವರ್ಷದಂತೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.
ಗಣೇಶ ಮೂರ್ತಿಗಳ ವಿಸರ್ಜನೆಗೆ ಗುರುತಿಸಿರುವ ಕೆರೆಗಳ ಕಲ್ಯಾಣಿಗಳ ಬಳಿ ಭದ್ರತೆಯ ದೃಷ್ಠಿಯಿಂದ ಪೊಲೀಸ್ ವ್ಯವಸ್ಥೆಯ ಜೊತೆಗೆ ಬ್ಯಾರಿಕೇಡಿಂಗ್, ಸಿಸಿಟಿವಿ, ವಿದ್ಯುತ್ ದ್ವೀಪ, ನುರಿತ ಈಜುಗಾರರ ವ್ಯವಸ್ಥೆ, ಕ್ರೇನ್‍ಗಳ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ತುಷಾರ್ ಗಿರಿನಾಥ್ ಹೇಳಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾದ ರಮಣಗುಪ್ತಾ, ಸತೀಶ್ ಕುಮಾರ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಉಪಸ್ಥಿತರಿದ್ದರು.