‘ಸಹಾಯಕ ಪ್ರಾಧ್ಯಾಪಕರ ನೇಮಕ’ಕ್ಕೆ ಗೆಜೆಟ್ ಅಧಿಸೂಚನೆ ಪ್ರಕಟ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಆಯ್ಕೆಯಾಗಿದ್ದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಹೊರಡಿಸಿದ್ದು, ಆದೇಶ ಪಡೆದ ಅಭ್ಯರ್ಥಿಗಳಿಗೆ ಇನ್ನೂ ಹದಿನೈದು ದಿನಗಳ ಒಳಗಾಗಿ ವರದಿ ಮಾಡಿಕೊಳ್ಳಲು ನಿರ್ದೇಶಿಸಲಾಗಿದೆ.
ಗುರುವಾರ ಈ ಸಂಬಂಧ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದ್ದು, ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ವಿವಿಧ ವಿಷಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಸರಕಾರವು ಅಧಿಸೂಚನೆ ಹೊರಡಿಸಿತ್ತು. ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ 2023ರ ನವೆಂಬರ್ 3ರಂದು ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ನಂತರದಲ್ಲಿ ನೇಮಕಾತಿ ಸಂಬಂಧ ಕೆಲ ಅಭ್ಯರ್ಥಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ನೇಮಕಾತಿ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತ್ತು.
ಇದೀಗ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆದೇಶ ಪ್ರತಿ ತಲುಪಿದ 15 ದಿನಗಳ ಒಳಗಾಗಿ ಆಯುಕ್ತರು ಕಾಲೇಜು ಶಿಕ್ಷಣ ಇಲಾಖೆ, ತಾಂತ್ರಿಕ ಭವನ, 2ನೆ ಮಹಡಿ, ಅರಮನೆ ರಸ್ತೆ, ಬೆಂಗಳೂರು ಇಲ್ಲಿ ವರದಿ ಮಾಡಿಕೊಳ್ಳಲು ಆದೇಶಿಸಿದೆ. ಆ ಬಳಿಕ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ನಿಯಮಾನುಸಾರ ಜೇಷ್ಠತೆಯ ಆಧಾರದ ಮೇಲೆ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸಿ ಅಭ್ಯರ್ಥಿಗಳಿಗೆ ಸ್ಥಳನಿಯುಕ್ತಿ ಆದೇಶವನ್ನು ನೀಡಲಿದ್ದಾರೆ.
ಅಭ್ಯರ್ಥಿಗಳು ಸ್ಥಳ ನಿಯುಕ್ತಿಗೊಳಿಸಿದ ಕಾಲೇಜಿನಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡ ದಿನಾಂಕದಿಂದ ವೇತನ ಹಾಗೂ ಇತರ ಭತ್ಯೆಗಳನ್ನು ಪಡೆಯಲು ಅರ್ಹರಿರುತ್ತಾರೆಂದು ಆದೇಶದಲ್ಲಿ ತಿಳಿಸಲಾಗಿದೆ. ಹಾಗೆಯೇ ಸರಕಾರದ ಪೂರ್ವಾನುಮತಿ ಪಡೆಯದೆ ನಿಗದಿತ ಅವಧಿಯೊಳಗೆ ವರದಿ ಮಾಡಿಕೊಳ್ಳಲು ವಿಫಲವಾಗುವ ಅಭ್ಯರ್ಥಿಯ ನೇಮಕಾತಿ ಆದೇಶ ತಾನಾಗಿಯೇ ಅನೂರ್ಜಿತವಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.