ಮಂಡ್ಯ | ಬಾಲಕಿಯ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಜೈಲು ಶಿಕ್ಷೆ
ಮಂಡ್ಯ, ಜು.27: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ 20 ವರ್ಷ ಶಿಕ್ಷೆ ವಿಧಿಸಿ ನಗರದ ನ್ಯಾಯಲಯ ಆದೇಶ ಮಾಡಿದೆ.
ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಬಿದರಕರೆ ಗ್ರಾಮದ ರವಿ(35) ಶಿಕ್ಷೆಗೆ ಒಳಗಾದ ಆರೋಪಿ.
ಆರೋಪಿ ರವಿ ತನ್ನದೇ ಗ್ರಾಮದ 5 ವರ್ಷದ ಅಪ್ರಾಪ್ತ ಬಾಲಕಿಯನ್ನು ತಿರುಗಾಡಿಕೊಂಡು ಬರೋಣವೆಂದು ಹೇಳಿ ಸ್ಕೋಟರ್ ನಲ್ಲಿ ಕೂರಿಸಿಕೊಂಡು ಲಾಳನಕೆರೆ ಬಳಿ ಕಲ್ಲುಬಂಡೆ ಹತ್ತಿ ಜಮೀನಿನಲ್ಲಿ ಲೈಂಗಿಕ ಕಿರುಕುಳ ನೀಡಿ, ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಈ ಸಂಬಂಧ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸರ್ಕಲ್ ಇನ್ಸ್ಪೆಕ್ಟರ್ ನಂಜಪ್ಪ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷರೋಪಣಾ ಪತ್ರ ಸಲ್ಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ನಗರದ ಅಧಿಕ ಸತ್ರ ಮತ್ತು ತ್ವರಿತಗತಿ 2ನೇ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಕೆ.ಎ.ನಾಗಜ್ಯೋತಿ ಅವರು ಆರೋಪಿಗೆ 20 ವರ್ಷ ಸಜೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಹೆಬ್ಬಕವಾಡಿ ನಾಗರಾಜು ಅವರು ವಾದ ಮಂಡಿಸಿದ್ದರು.