ಕೊಡಗು | ಅಬ್ಬಿಫಾಲ್ಸ್ ನಲ್ಲಿ ಮುರಿದು ಬಿದ್ದ ಭಾರೀ ಮರ; ಪ್ರವಾಸಿಗರು ಪಾರು!
ನಾಪೋಕ್ಲು: ಮಡಿಕೇರಿ ಬಳಿಯ ಪ್ರವಾಸಿ ತಾಣ ಅಬ್ಬಿಫಾಲ್ಸ್ ನಲ್ಲಿ ಮಂಗಳವಾರ ಭಾರೀ ಅಪಾಯ (ಅವಗಡ) ವೊಂದು ತಪ್ಪಿದಂತಾಗಿದೆ. ಮುಖ್ಯರಸ್ತೆಯಿಂದ ಜಲಧಾರೆಗೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಭಾರೀ ಗಾತ್ರದ ಒಣಮರವೊಂದು ಮುರಿದು ಬಿದ್ದಿದ್ದು, ಕೂದಲೆಳೆ ಅಂತರದಿಂದ ಪ್ರವಾಸಿಗರು ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಮಂಗಳವಾರ ಬೆಳಗ್ಗಿನಿಂದಲೇ ಜಲಧಾರೆ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದರು. ಈ ವೇಳೆ ಕಾಫಿ ತೋಟದಲ್ಲಿದ್ದ ಒಣ ಮರವೊಂದು ಏಕಾಏಕಿ ಮುರಿದು ರಸ್ತೆಗಟ್ಟಲಾಗಿ ಬಿದ್ದಿದೆ. ಮರ ಬಿದ್ದ ಸ್ಥಳದಿಂದ ಕೆಲವರು ಆಗಷ್ಟೇ ಮುಂದೆ ಸಾಗಿದ್ದರೆ, ಇನ್ನೂ ಕೆಲವರು ತರಾತುರಿಯಿಂದ ಜಲಧಾರೆಯನ್ನು ಕಣ್ತುಂಬಿಕೊಳ್ಳಲು ಬರುತ್ತಿದ್ದರು. ಅದೃಷ್ಟವಶಾತ್, ಮರ ಮಾರ್ಗಕ್ಕೆ ಅಡ್ಡಲಾಗಿ ಬೇಲಿಯ ಮೇಲೆ ಬಿದ್ದಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಇಂಥ ಜನಸಂದನಿ ಇರುವಂತಹ ದಾರಿಯಲ್ಲಿ ಅಪಾಯದಲ್ಲಿರುವ ಮರವನ್ನ ಸಂಬಂಧಿಸಿದವರು ತೆರವುಗೊಳಿಸದೆ ಇರುವ ಬಗ್ಗೆ ಪ್ರವಾಸಿಗರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.