ಡ್ರೈ ಫ್ರೂಟ್ಸ್ ಪ್ಯಾಕೆಟ್ನಲ್ಲೂ ಚಿನ್ನ.!: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮೂವರು ಮಹಿಳೆಯರ ಬಂಧನ, 67 ಲಕ್ಷ ರೂ. ಮೌಲ್ಯದ ಚಿನ್ನ ವಶ
Photo - ANI
ಬೆಂಗಳೂರು: ಇಲ್ಲಿನ ದೇವನ ಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಮೂರು ಪ್ರಕರಣಗಳಲ್ಲಿ 67 ಲಕ್ಷ ರೂ. ಮೌಲ್ಯದ 1 ಕೆಜಿ 133 ಗ್ರಾಂ ಚಿನ್ನ ಜಪ್ತಿ ಮಾಡಿದ್ದಾರೆ.
ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶುಕ್ರವಾರ( ಅಕ್ಟೋಬರ್ 20) ತಡರಾತ್ರಿ ಹಾಗೂ ಶನಿವಾರ ಮುಂಜಾನೆ ಮಲೇಷ್ಯಾ, ಕುವೈತ್ ಮತ್ತು ಕ್ವಾಲಲಂಪುರ ನಿಂದ ಬಂದ ಮೂವರು ಪ್ರಯಾಣಿಕರು ಚಿನ್ನವನ್ನು ಡ್ರೈ ಫ್ರೂಟ್ಸ್ ನಲ್ಲಿ ಬೆರೆಸಿ ಹಾಗೂ ತೊಟ್ಟಿದ್ದ ರವಿಕೆಯಲ್ಲಿ ಇರಿಸಿ ಸಾಗಣೆ ಮಾಡಲು ಯತ್ನಿಸಿದ್ದಾರೆ.
ಕ್ವಾಲಲಂಪುರದಿಂದ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದ ಭಾರತೀಯ ಮೂಲದ ಮಹಿಳೆಯೊಬ್ಬರು ತೊಟ್ಟಿದ್ದ ರವಿಕೆಯಲ್ಲಿ 300.95 ಗ್ರಾಂ ಚಿನ್ನದ ಪೇಸ್ಟ್ಅನ್ನು ಇರಿಸಿದ್ದರು. ಇದನ್ನು ನೋಡಿ ತಪಾಸಣಾ ಅಧಿಕಾರಿಗಳು ಆಶ್ಚರ್ಯಗೊಂಡಿದ್ದಾರೆ.
ಇದೇ ವಿಮಾನದಲ್ಲಿ ಬಂದಿದ್ದ ಮಲೇಷ್ಯಾ ಮೂಲದ ಮಹಿಳೆ ಗುದದ್ವಾರದಲ್ಲಿ ನಾಲ್ಕು ಕ್ಯಾಪ್ಸೂಲ್ಗಳಲ್ಲಿ ಒಟ್ಟು 578.27 ಗ್ರಾಂ ಚಿನ್ನವನ್ನು ಅಡಗಿಸಿಟ್ಟುಕೊಂಡು ಬಂದಿದ್ದಳು.ವೈದ್ಯರ ಸಹಾಯದಿಂದ ಗುದದ್ವಾರದಲ್ಲಿದ ಚಿನ್ನವನ್ನು ಹೊರತೆಗೆದಿದ್ದು, ಅದರ ಮೌಲ್ಯ 34.4 ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೈಫ್ರೂಟ್ಸ್ ಪಾಕೆಟ್ನಲ್ಲಿ ಚಿನ್ನ!
ಮತ್ತೊಂದು ಪ್ರಕರಣದಲ್ಲಿ ಭಾರತ ಮೂಲದ ವ್ಯಕ್ತಿಯೊರ್ವ ಕುವೈತ್ನಿಂದ ಬಂದಿದ್ದು, ಡ್ರೈಫ್ರೂಟ್ಸ್ ಪಾಕೆಟ್ನಲ್ಲಿ ಸಣ್ಣ ಸಣ್ಣ ಚೂರುಗಳ ರೂಪದಲ್ಲಿ ಚಿನ್ನ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದು, 15 ಲಕ್ಷ ರೂ. ಮೌಲ್ಯದ 250 ಗ್ರಾಂ ಚಿನ್ನ ಜಪಿ ಮಾಡಿದ್ದಾರೆ. ಜೊತೆಗೆ 1 ಐಪೋನ್ ಸಹ ಅಧಿಕಾರಿಗಳು ವಶಪಡಿಸಿಕೊಂಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.